ಬೆಂಗಳೂರು: ನೇಪಾಳದಿಂದ ಭಾರತಕ್ಕೆ ಬಂದು ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಮನೆಹಾಳರನ್ನ ಕೊನೆಗೂ ಜೀವನ್ ಭೀಮಾನಗರ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ನೇಪಾಳದಿಂದ ಬೆಂಗಳೂರಿಗೆ ಬಂದ ಈ ಖತರ್ನಾಕ್ ದಂಪತಿ ಜೆ.ಬಿ ನಗರ ಠಾಣಾ ವ್ಯಾಪ್ತಿಯ ವಿನೋದ್ ಅನ್ನೋರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕೆಲಸಕ್ಕೆ ಸೇರಿಕೊಂಡಿದ್ರು. ಜೂನ್ 29 ರಂದು ವಿನೋದ್ರ ವಯಸ್ಸಾದ ತಾಯಿಯ ಹೊರತು ಇನ್ಯಾರು ಮನೆಯಲ್ಲಿರಲಿಲ್ಲ.. ಇದೇ ಸರಿಯಾದ ಟೈಂ ಅಂತಾ ಪ್ಲಾನ್ ಮಾಡಿಕೊಂಡಿದ್ದ ಇಬ್ಬರೂ ವಿನೋದ್ ತಾಯಿಯ ಕೈಕಾಲು ಕಟ್ಟಿ ಬಾಯಲ್ಲಿ ಬಟ್ಟೆ ಇಟ್ಟು ಮನೇಲಿದ್ದ ಹತ್ತು ಲಕ್ಷ ನಗದು, 150 ಗ್ರಾಂ ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ರು.
ಮನೆಗೆ ಬಂದು ಕ್ರೈಂ ಸೀನ್ ನೋಡಿದ್ದ ವಿನೋದ್ ದಂಪತಿ ಸೀದಾ ಜೆ.ಬಿ ನಗರ ಪೊಲೀಸರಿಗೆ ದೂರು ನೀಡಿದ್ರು. ಜೆ.ಬಿ ನಗರ ಇನ್ಸ್ಪೆಕ್ಟರ್ ರಾಜಣ್ಣ ಅಂಡ್ ಟೀಂ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪ್ರತಾಪ್ ಸಿಂಗ್ ಅಲಿಯಾಸ್ ಪ್ರೇಮ ಬಹದ್ದೂರ್, ಸಂಗೀತಾ ಅಲಿಯಾಸ್ ಸೋನು ಬಂಧಿತರು. ಇವ್ರಿಬ್ರು ಆನೇಕಲ್ ಕಡೆ ಹೋಗಿ ತಲೆಮರೆಸಿಕೊಂಡಿದ್ರು.
ಇನ್ನು ಆರೋಪಿಗಳು ಯಾವುದೇ ದಾಖಲೆಗಳಿಲ್ಲದೇ ಭಾರತಕ್ಕೆ ಬಂದಿರೋದು ಗೊತ್ತಾಗಿದೆ. ಇವ್ರ ಹಿಂದೆ ಬೇರೆ ಗ್ಯಾಂಗ್ ಕೂಡ ಇರೋ ಶಂಕೆ ಮೂಡಿದ್ದು ತನಿಖೆ ಮುಂದುವರೆದಿದೆ.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
06/07/2022 09:40 pm