ದೊಡ್ಡಬಳ್ಳಾಪುರ : ಕೆರೆ ಅಂಚಿನಲ್ಲಿ ತೋಟದ ಮಾದರಿಯಲ್ಲಿ ಮಾಡಿದ ರೆಸಾರ್ಟ್ ಅದು. ಮೋಜು ಮಾಡುವ ಕಾರಣಕ್ಕೆ ಕೃಷಿಹೊಂಡ ನಿರ್ಮಿಸಲಾಗಿತ್ತು. ಆದರೆ, ಅಲ್ಲಿ ಯಾವುದೇ ಸುರಕ್ಷಾ ಕ್ರಮ ಇರಲಿಲ್ಲ. ಇದೇ ಕೃಷಿಹೊಂಡಕ್ಕೆ ಕೂಲಿಕಾರ್ಮಿಕ ಬಿದ್ದು ಸಾವನ್ನಪ್ಪಿರುವುದು ಸಂಶಯಕ್ಕೆ ಎಡೆಮಾಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ಉಜ್ಜಿನಿ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ 25 ವರ್ಷದ ಲಿಂಗರಾಜು ಮೃತಪಟ್ಟ ದುರ್ದೈವಿ. ಬೆಂಗಳೂರು ಮೂಲದ ಸುರೇಶ್ ಹೊಳ್ಳ 4 ಎಕರೆ 30 ಗುಂಟೆ ಜಮೀನು ಖರೀದಿ ಮಾಡಿ ಚಿಲಿಪಿಲಿ ರೆಸಾರ್ಟ್ ಮಾಡಿದ್ರು. ಲಿಂಗರಾಜು ಇಲ್ಲಿ ಕೂಲಿ ಕಾರ್ಮಿಕನಾಗಿದ್ದ. ಕೊನೆಯದಾಗಿ ಜೂ. 14 ರಂದು ಊರ ಜಾತ್ರೆಯಲ್ಲಿ ಕಾಣಿಸಿಕೊಂಡಿದ್ದ ಈತ, 2 ದಿನದಿಂದ ನಾಪತ್ತೆಯಾಗಿದ್ದ. ಜೂ. 16ರಂದು ಕೃಷಿಹೊಂಡದಲ್ಲಿ ಹೆಣವಾಗಿ ಪತ್ತೆಯಾಗಿದ್ದ.
ಸುರೇಶ್ ಹೊಳ್ಳ ತಮ್ಮ ಚಿಲಿಪಿಲಿ ಫಾರ್ಮ್ ರೆಸಾರ್ಟ್ ನಲ್ಲಿ ತಮ್ಮ ಆಪ್ತರಿಗಾಗಿ ಸಾಹಸ ಕ್ರೀಡೆ ಆಯೋಜಿಸುತ್ತಿದ್ದರು.ಪರಿಸರ ವೀಕ್ಷಣೆ, ಟ್ರೆಕ್ಕಿಂಗ್, ಬೋಟಿಂಗ್ ಸಹ ಇತ್ತು. ಕೃಷಿಹೊಂಡಕ್ಕೆ ಹೊಳ್ಳಾಸ್ ಹೊಳ್ಳ ಎಂಬ ಹೆಸರಿಟ್ಟು ಬೋಟಿಂಗ್ ಮಾಡುತ್ತಿದ್ದರು. ಕೃಷಿ ಹೊಂಡದ ಮೇಲೆ ಕಾಟೇಜ್ ನಿರ್ಮಾಣ ಸಹ ಮಾಡಿದ್ದರು. ಆದರೆ, ಸುರಕ್ಷೆಗಾಗಿ ಹಾಕಬೇಕಿದ್ದ ತಂತಿಬೇಲಿ ಹಾಕಿರಲಿಲ್ಲ. ಮದ್ಯವ್ಯಸನಿ ಲಿಂಗರಾಜು ಜಾತ್ರೆ ದಿನ ಕಂಠಪೂರ್ತಿ ಕುಡಿದಿದ್ದು, ರಾತ್ರಿ ರೆಸಾರ್ಟ್ ನಲ್ಲಿ ಮಲಗಲು ಬಂದಿದ್ದ ಆತ ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ.
ಸ್ಥಳಕ್ಕೆ ಇನ್ಸ್ ಪೆಕ್ಟರ್ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಲಿಂಗರಾಜು ಸಾವಿನ ರಹಸ್ಯ ಬಯಲಾಗಲಿದೆ.
Kshetra Samachara
17/06/2022 10:08 pm