ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯ ಸರ್ಕಾರಿ ನೌಕರರ ಕಾರನ್ನು ಅಡ್ಡಗಟ್ಟಿದ ದರೋಡೆ ಕೋರರು ಹಲ್ಲೆ ನಡೆಸಿದ ಘಟನೆ ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಶಿಕ್ಷಣ ಇಲಾಖೆ ಉಪನಿರ್ದೇಶಕ ಹನುಮಂತರಾಜು, ಸಹಾಯಕ ಮುಕುಂದ್ ಹಾಗು ಇಬ್ಬರು ಮಹಿಳಾ ಸಿಬ್ಬಂದಿ ಜಿಲ್ಲಾಡಳಿತ ಕಚೇರಿಯಲ್ಲಿ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದರು. ಸಂಜೆ 6.30 ರಿಂದ 7ಗಂಟೆಯ ವೇಳೆಯಲ್ಲಿ ದೊಡ್ಡಬಳ್ಳಾಪುರ ರಸ್ತೆ ರಘುನಾಥಪುರದ ಬಳಿ ಅಪರಿಚಿತರು ಕಾರನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದಾರೆ. ಇದೇ ವೇಳೆ ಕಾರು ಚಾಲಕ ಮುಕುಂದನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಈಗಾಗಲೇ ಪೊಲೀಸರು ದರೋಡೆಕೋರರ ಕಾರನ್ನು ಟ್ರೇಸ್ ಮಾಡಿದ್ದು, ದರೋಡೆಕೋರರು ಯಾರು ಎನ್ನುವುದು ಸದ್ಯದಲ್ಲೇ ತಿಳಿಯಲಿದೆ ಎಂದು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಗಂಗಾಧರ ತಿಳಿಸಿದ್ದಾರೆ.
ಇನ್ನು ಸರ್ಕಾರಿ ಕಚೇರಿಗಳಲ್ಲಿ ನೌಕರರು ಹೆಚ್ಚಿನ ಸಮಯ ಕಾರ್ಯ ನಿರ್ವಹಿಸಬೇಕಾದ ಕಾರಣ ಸಂಜೆ ತಡವಾಗಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೆ ಸಂಜೆ ವೇಳೆ ಯಾವುದೇ ಸುರಕ್ಷತೆ ಇಲ್ಲದಿರುವುದರಿಂದ ನೌಕರರಿಗೆ ಸಂಜೆ 5ಗಂಟೆಗೆ ಮನೆಗೆ ಕಳುಹಿಸುವಂತೆ ಜಿಲ್ಲಾಧಿಕಾರಿ ಶ್ರೀನಿವಾಸ್ ರವರಿಗೆ ಮನವಿ ಮಾಡಿದ್ದಾರೆ.
ಒಟ್ಟಾರೆಯಲ್ಲಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ದುಡಿಯುವ ಸರ್ಕಾರಿ ನೌಕರರಿಗೆ ಸೇಫ್ಟಿ ಇಲ್ಲದಂತಾಗಿದೆ. ಇನ್ನಾದ್ರೂ ಜಿಲ್ಲಾಧಿಕಾರಿ & ಅಧಿಕಾರಿಗಳು ನೌಕರರಿಗೆ ತುರ್ತು ಸಂದರ್ಭದಲ್ಲಿ ಹೊರತು ಪಡಿಸಿ ಉಳಿದ ದಿನ ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ ಮನೆಗಳಿಗೆ ತೆರಳಲು ಸೂಚಿಸಬೇಕಿದೆ.
Kshetra Samachara
29/05/2022 07:57 am