ಬೆಂಗಳೂರು: ಈ ಫೋಟೊದಲ್ಲಿ ಕಾಣ್ತಿರೋ ಯುವಕನ ಹೆಸರು ನವೀನ್. 31 ವರ್ಷ ವಯಸ್ಸಿನ ನವೀನ್ ಮತ್ತವನ ಪೋಷಕ್ರು ಆಂಧ್ರದ ಮಡಕಶಿರಾ ಜಿಲ್ಲೆಯಿಂದ ಬದುಕು ಕಟ್ಟಿಕೊಳ್ಳೋಕೆ ಅಂತ ಬೆಂಗಳೂರಿಗೆ ಬಂದು ನೆಲೆಸಿದ್ರು.
ನವೀನ್ ಸಹ ಪೀಣ್ಯ ಬಳಿಯ ಗಾರ್ಮೆಂಟ್ಸ್‌ನಲ್ಲಿ ಕ್ವಾಲಿಟಿ ಕಂಟ್ರೊಲರ್ ಆಗಿ ಕೆಲಸ ಮಾಡ್ತಿದ್ದ. ಆದ್ರೆ, ಆತನಿಗೆ ಒಂದು ಜೋಡಿ ಸಿಕ್ಕಿರಲಿಲ್ಲ. ಮದುವೆ ವಯಸ್ಸು ಬಂದ್ರೂ ಇನ್ನೂ ಹುಡುಗಿ ಸಿಗಲಿಲ್ಲ ಅಂತ ಕೊರಗುತ್ತಿದ್ದ ನವೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆದ್ರೆ, ಕುಟುಂಬಸ್ಥರು ಮಾತ್ರ ಕೆಲಸದ ವೇಳೆ ಏನೋ ಅವಘಡ ಆಗಿ ಸಾವನ್ನಪ್ಪಿದ್ದಾನೆ. ಸಂಸ್ಥೆಯವ್ರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಅಸಲಿಗೆ ಆತ ಮದುವೆ ಆಗದ ಕಾರಣಕ್ಕೆ ಸಾವನ್ನಪ್ಪಿದ್ದು ಎಂದು ಪೊಲೀಸರ ತನಿಖೆ ವೇಳೆ ಮಾಹಿತಿ ಲಭಿಸಿದೆ. ನವೀನ್ ಗೆ ಬಲಗೈ ಸ್ವಾಧೀನ ಕಡಿಮೆ ಇದ್ದ ಕಾರಣ ಮದುವೆಗೆ ಹುಡುಗಿಯರೆಲ್ಲ ನಿರಾಕರಿಸುತ್ತಿದ್ರು ಎನ್ನಲಾಗಿದೆ.
ಅಲ್ಲದೆ, ಇತ್ತೀಚೆಗೆ ಆತನ ತಂದೆಗೂ ಆರೋಗ್ಯ ಸಮಸ್ಯೆ ಉಲ್ಭಣಿಸಿತ್ತು. ಆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆಂದು ನಿರ್ಧರಿಸಿದ್ದ ನವೀನ್, ಪೀಣ್ಯ ಐಟಿಐ ಕಾಲೇಜು ಕಾಂಪೌಂಡ್ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಆತನ ಚೀರಾಟ ಕೇಳಿ ಸ್ಥಳೀಯರು ತಕ್ಷಣ ಆತನನ್ನ ಇಎಸ್‌ಐ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ಸಾಗಿಸುವ ವೇಳೆ ನವೀನ್ ಪೊಲೀಸರ ಬಳಿ ತನ್ನ ಸಾವಿಗೆ ಕಾರಣ ಏನೆಂದು ತಿಳಿಸಿದ್ದಾನಂತೆ. ಸಪ್ತಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನವೀನ್ ಕೊನೆಯುಸಿರು ಎಳೆದಿದ್ದಾನೆ.
ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಷಕರ ಆರೋಪದ ಹಿನ್ನೆಲೆ ಅನುಮಾನಾಸ್ಪದ ಸಾವು ಎಂದು ಕೇಸು ದಾಖಲಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
28/05/2022 09:38 pm