ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ ಕಂಟನಕುಂಟೆ ಗ್ರಾಮದ ರೈತರೊಬ್ಬರು ಸಾಲಬಾಧೆಗೆ ಬೇಸತ್ತು ತನ್ನ ಜಮೀನಿನಲ್ಲಿದ್ದ ಹಲಸಿನ ಮರಕ್ಕೆ ನೇಣು ಹಾಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ, ಮೃತ ವ್ಯಕ್ತಿಯ ಇದೇ ಗ್ರಾಮದ ನಿವಾಸಿ ಹನುಮಯ್ಯ(60) ಗುರುತಿಸಲಾಗಿದೆ.
ಮೃತ ಹನುಮಯ್ಯನಿಗೆ 1 ಎಕರೆ 20 ಗುಂಟೆ ಜಮೀನು ಇದ್ದು, ರಾಗಿ ಮತ್ತು ಜೋಳವನ್ನ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆ ಹಾಗೂ ಮಗಳ ಮದುವೆಗಾಗಿ ಹನುಮಯ್ಯ ಖಾಸಗಿ ವ್ಯಕ್ತಿಗಳಿಂದ ಆರು ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಎಂಟು ಮಂದಿ ಮಕ್ಕಳಿರುವ ತುಂಬು ಕುಟುಂಬವಾದರೂ ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದರು.
ಕುಟುಂಬ, ಕೃಷಿ ಮತ್ತು ಮದುವೆಗಾಗಿ ಮಾಡಿದ್ದ ವೈಯಕ್ತಿಕ ಸಾಲ ವಿಪರೀತವಾಗಿತ್ತು. ಸಾಲ ತೀರಿಸುವುದು ಹೇಗೆ ಎಂಬ ಬಗ್ಗೆ ಯಾವಾಗಲೂ ಯೋಚಿಸುತ್ತಿದ್ದರು. ಮನೆಯ ಪರಿಸ್ಥಿತಿ ಕೂಡ ತೀರಾ ಹದಗೆಟ್ಟಿತ್ತು. ಈ ಎಲ್ಲ ಕಾರಣಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬಸ್ಥರು ತಮ್ಮ ನೋವು ತೊಡಿಕೊಂಡರು.
ಸಾಲ ತೀರಿಸಲಾಗದ ಹತಾಶ ಸ್ಥಿತಿಯಲ್ಲಿ ನಿತ್ಯ ಕೊರಗುತ್ತಿದ್ದ ಹನುಮಯ್ಯ ತಮ್ಮ ಜಮೀನಿನ ಹಲಸಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಸುತ್ತಮುತ್ತಲಿನ ಹೊಲಗಳ ರೈತರು ಗಮನಿಸಿ, ಕೂಡಲೇ ಹನುಮಯ್ಯ ಅವರನ್ನು ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
28/05/2022 05:48 pm