ಬೆಂಗಳೂರು: ಆ ಮಹಿಳೆ ರಾತ್ರಿ ಪ್ರಯಾಣಕ್ಕೆ ಕೆಎಸ್ಆರ್ಟಿಸಿ ಬಸ್ ಸೇಫ್ ಅಂತ ರಾಜಹಂಸ ಸ್ಲೀಪರ್ ಕೋಚ್ ಬಸ್ ಬುಕ್ ಮಾಡಿದ್ರು. ಆದ್ರೆ ರಾತ್ರಿ ಹೊತ್ತು ಸರ್ಕಾರಿ ಬಸ್‌ನಲ್ಲಿ ಒಂಟಿ ಮಹಿಳೆಯರಿಗೆ ಸುರಕ್ಷತೆ ಇದ್ಯಾ? ಎಂಬ ಪ್ರಶ್ನೆ ಮೂಡುವ ಪ್ರಕರಣ ಒಂದು ನಡೆದಿದೆ. ಆ ನಿರ್ವಾಹಕ ಮಹಿಳಾ ಪ್ರಯಾಣಿಕಳ ಬಳಿ ಮಾಡಿದ ತಪ್ಪಿಗೆ ಸದ್ಯ ಅಮಾನತ್ತಾಗಿದ್ದಾನೆ.
ಹೀಗೆ ಗಾಯಗೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಈ ಮಹಿಳೆಯ ಹೆಸರು ಸಿರಾಜ್ ಉನ್ನೀಸಾ. ಬೆಂಗಳೂರಿನ ಟಿ.ದಾಸರಹಳ್ಳಿ ನಿವಾಸಿ. ಬೇಸಿಗೆ ರಜೆ ಹಿನ್ನೆಲೆ ಮಕ್ಕಳನ್ನ ತಮ್ಮ ಸ್ವಂತ ಊರಾದ ಚಿಕ್ಕಮಗಳೂರಿನ ಕೊಪ್ಪಗೆ ಕರೆದುಕೊಂಡು ಹೋಗಿ ವಾಪಸ್ ಬೆಂಗಳೂರಿಗೆ ಬರುವ ವೇಳೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಹಲ್ಲೆ ಮಾಡಿರೋದಾಗಿ ಆರೋಪ ಮಾಡಿದ್ದಾಳೆ. ಇನ್ನೂ ಗಾಯಾಳು ಸಿರಾಜ್ ಉನ್ನೀಸಾ, ರಾತ್ರಿ ಪ್ರಯಾಣಕ್ಕೆ ಕೆಎಸ್ಆರ್ಟಿಸಿ ಬಸ್ ಸೇಫ್ ಎಂದು ಬೆಂಗಳೂರು ಶಾಂತಿನಗರ ಡಿಪೋಗೆ ಸೇರಿದ ರಾಜಹಂಸ ಸ್ಲೀಪರ್ ಕೋಚ್ ಬಸ್ ಬುಕ್ ಮಾಡಿ ನಿನ್ನೆ ರಾತ್ರಿ ತನ್ನಿಬ್ಬರು ಮಕ್ಕಳೊಂದಿಗೆ ಕೊಪ್ಪದಿಂದ ಬೆಂಗಳೂರಿಗೆ ಹೊರಟಿದ್ದಾರೆ. ಇನ್ನೇನು ದಾಸರಹಳ್ಳಿ ಸ್ಟಾಪ್ ಬರ್ತಿದ್ದಂತೆ ಎಚ್ಚರಗೊಂಡ್ರು. ಆದ್ರೆ ರಾತ್ರಿ ಇಡೀ ಜರ್ನಿ ಮಾಡಿದ್ರಿಂದ ನಿದ್ದೆ ಮಂಪರಿನಲ್ಲಿದ್ದ ಗಾಯಾಳು ಸಿರಾಜ್ ಉನ್ನೀಸಾ ನಿಲ್ದಾಣ ಬಂದಾಗ ಬಸ್‌ನಲ್ಲಿ ಬಿಟ್ಟಿದ್ದ ಚಪ್ಪಲಿ ಹುಡುಕೋದು ಸ್ವಲ್ಪ ತಡವಾಗಿದೆ. ಕೊನೆಗೆ ಚಪ್ಪಲಿ ಸಿಗದಿದ್ದಕ್ಕೆ ಚಪ್ಪಲಿ ಬಿಟ್ಟು ಲಗೇಜ್ ಹಾಗೂ ಮಕ್ಕಳೊಂದಿಗೆ ಬಸ್ ಇಳಿಯುವುದು ತಡವಾದ ಕಾರಣ ಬಸ್ ನಿರ್ವಾಹಕ ರವಿಕುಮಾರ್ ಸಿಟ್ಟಿಗೆದ್ದು ಮನಸೋ ಇಚ್ಚೆ ಅವಾಚ್ಯ ಶಬ್ದಗಳಿಂದ ಮಹಿಳೆಗೆ ನಿಂದಿಸಿದ್ದಲ್ಲದೆ, ತನ್ನ ಶೂ ಕಾಲಿನಿಂದ ಒದ್ದು ಹಲ್ಲೆ ನೆಡೆಸಿದ್ದಾನೆ. ಹಾಗೂ ಬೇಗ ಬಸ್‌ನಿಂದ ಇಳಿಯುವಂತೆ ಕುತ್ತಿಗೆ ಹಿಡಿದು ಹೊರದಬ್ಬಿದ್ದಾನೆ ಎಂದು ಹಲ್ಲೆಗೊಳಗಾದ ಮಹಿಳೆ ದೂರಿದ್ದಾಳೆ. ಇದೇ ವೇಳೆ ಸ್ಥಳದಲ್ಲಿದ್ದ ಆಟೋ ಚಾಲಕ ಶಿವಕುಮಾರ್ ಕೂಡ ಮಧ್ಯೆ ಪ್ರವೇಶಿಸಿ ಪ್ರಯಾಣಿಕರ ಮೇಲಿನ ವರ್ತನೆ ಸರಿಯಿಲ್ಲ ನಿರ್ವಾಹಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ವಿಷಯ ತಿಳಿದ ಕೆಲ ಸಂಘಟನೆಗಳು ಪೊಲೀಸ್ ಠಾಣೆ ಬಳಿ ಕೆಲಕಾಲ ಪ್ರತಿಭಟನೆ ನಡೆಸಿದ್ರು. ಸದ್ಯ ಘಟನೆಗೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸರು ನಿರ್ವಾಹಕನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಸಂಸ್ಥೆ ಮಹಿಳಾ ಪ್ರಯಾಣಿಕಳ ಮೇಲೆ ಹಲ್ಲೆ ನೆಡೆಸಿದ ನಿರ್ವಾಹಕ ರವಿಕುಮಾರ್‌ನನ್ನು ವಿಚಾರಣಾಧೀನ ಅಮಾನತ್ತುಗೊಳಿಸಿ ಕ್ರಮ ಕೈಗೊಂಡಿದ್ದಾರೆ.
PublicNext
24/05/2022 09:38 pm