ಬೆಂಗಳೂರು: ಅವರಿಬ್ರಿಗೂ ಇನ್ನೂ ಚಿಗುರು ಮೀಸೆ, ಆದ್ರೆ ಅವ್ರ ಖತರ್ನಾಕ್ ಹಿಸ್ಟರಿ ಕೇಳಿದ್ರೆ ಮಾತ್ರ ಒಂದು ಕ್ಷಣ ಎದೆ ಝಲ್ ಅನ್ನೋದು ಗ್ಯಾರಂಟಿ. ಏನೋ ಚಿಕ್ ಹುಡುಗ್ರು ಸುಲಿಗೆ ಮಾಡೋಕೆ ಹೋಗಿ ಸಿಕ್ಕಾಕೊಂಡವ್ರೆ ಅಂತಾ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಕಾದಿತ್ತು ದೊಡ್ಡ ಶಾಕ್.. ಅಷ್ಟಕ್ಕೂ ಶಾಕ್ ಆಗೋ ಮಾಹಿತಿ ಆದ್ರು ಏನೂ ಅಂತೀರಾ ನೀವೇ ನೋಡಿ..
ಈ ಭಯಂಕರ ಕ್ರಿಮಿನಲ್ಗಳ ಹೆಸ್ರು ಅಖಿಲೇಶ್ ಮತ್ತು ಸಂಜಯ್. ಈ ವಯಸ್ಸಿಗೆ ಇವ್ರು ಕ್ರಿಮಿನಲ್ಗಳು ಅಂತ ಅನ್ಸೋದೆ ಇಲ್ಲ.. ಈ ಇಬ್ರು ಖತರ್ನಾಕ್ ಕ್ರಿಮಿನಲ್ಸ್ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ಕೂಲಿ ಕೆಲಸಗಾರ ಹುಲಿಗೆಪ್ಪನನ್ನ ಅಡ್ಡಗಟ್ಟಿ, ಆತನ ಕುತ್ತಿಗೆಗೆ ಡ್ರ್ಯಾಗರ್ ಇಟ್ಟು ಆತನ ಮೊಬೈಲ್ ಕಸಿದು ಪರಾರಿಯಾಗ್ತಿದ್ರು. ಅದೇ ವೇಳೆಗೆ ಹುಲಿಗೆಪ್ಪ ಜೋರಾಗಿ ಕಳ್ಳ ಕಳ್ಳ ಅಂತ ಚೀರಾಡಿದ್ರಿಂದ ಸುತ್ತಮುತ್ತಲಿದ್ದ ಸ್ಥಳೀಯರು ಬೈಕ್‌ನಲ್ಲಿ ಬರ್ತಿದ್ದ ಈ ಇಬ್ಬರನ್ನ ಹಿಡಿದು ಬಾಗಲಗುಂಟೆ ಪೊಲೀಸ್ರಿಗೆ ಒಪ್ಪಿಸಿದ್ದಾರೆ.
ಪೊಲೀಸ್ರು ತಮ್ಮ ಆ್ಯಂಗಲ್ನಲ್ಲಿ ಈ ಆರೋಪಿಗಳ ಸುಲಿಗೆ ಪ್ರಕರಣ ತನಿಖೆ ನಡೆಸುತ್ತಿದ್ದಾಗ, 2019 ರಲ್ಲೇ ಈ ಇಬ್ರು ಹಣಕಾಸಿನ ವಿಚಾರದಲ್ಲಿ ಶ್ರೀರಾಂಪುರದ ಜ಼ೊಮ್ಯಾಟೋ ಡೆಲಿವರಿ ಬಾಯ್ ಮಂಜುನಾಥ್ ಎಂಬುವನ ಕೊಲೆ ಕೇಸ್‌ನಲ್ಲಿ ಬಾಲಾಪರಾಧಿಗಳಾಗಿ ರಿಮ್ಯಾಂಡ್ ರೂಂ ಸೇರಿಕೊಂಡಿದ್ರು. ಬಳಿಕ ಹೊರ ಬಂದು ತಮಿಳುನಾಡಿನ ಪುದೂರಿನ ಜಾತ್ರೆಯೊಂದ್ರಲ್ಲಿದ್ದಾಗ ಮಂಜುನಾಥ್ನ ಸ್ನೇಹಿತರಾದ ಶ್ರೀರಾಂಪುರ ಗ್ಯಾಂಗ್ ರಿವೇಂಜ್ ತೀರಿಸಿಕೊಳ್ಳಲು ಹೋಗಿದ್ರು, ಅವರಲ್ಲಿ ಇಬ್ಬರನ್ನ ಈ ಸಂಜಯ್ ಒಬ್ಬನೇ ಕೊಂದು ತಮಿಳುನಾಡಿನ ಆರ್.ಕೆ ಪೇಟೆ ಪೊಲೀಸರ ಅತಿಥಿಯಾಗಿದ್ದ. ಸದ್ಯ ಕದ್ದ ರೆಡ್ ಪಲ್ಸರ್ ಬೈಕ್ ಒಂದನ್ನ ಇಟ್ಕೊಂಡಿದ್ದ ಈ ಜೋಡಿಗಳು ಮನೆಯಿಂದ ಆಚೆ ಹೋದ್ರೆ ಮಿನಿಮಮ್ ಅಂದ್ರು 10 ಸಾವಿರ ಹಣ ದೋಚದೆ ವಾಪಸ್ಸು ಮನೆಗೆ ಹೋಗ್ತಿರ್ಲಿಲ್ಲ. ಅಲ್ಲದೆ ತಮಗೆ ಬೇಕಾದ ಎಣ್ಣೆ, ಗಾಂಜಾಗೆ ಹಣ ಕಸಿದು ಅಂದು ಎಂಜಾಯ್ ಮಾಡ್ತಿದ್ರು.
ಒಟ್ಟಾರೆ ಈ ಸಣ್ಣ ವಯಸ್ಸಿನಲ್ಲೇ ಎಂಜಾಯ್ ಮಾಡಲು ಕೊಲೆ,ಸುಲಿಗೆ ಮಾಡುತ್ತಿದ್ದ ಈ ಆರೋಪಿಗಳು ಸದ್ಯ ಬಾಗಲಗುಂಟೆ ಪೊಲೀಸರ ಅತಿಥಿಯಾಗಿದ್ದು, ಬಂಧಿತರಿಂದ 7 ಮೊಬೈಲ್, ಒಂದು ಡ್ರ್ಯಾಗರ್, 1 ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
PublicNext
27/04/2022 05:35 pm