ಮಹದೇವಪುರ: ಡ್ರಗ್ ಗಳು ಸರಬರಾಜಾಗೋದು ಬಹುತೇಕ ಪಾರ್ಟಿಗಳಲ್ಲೆ. ಈ ಹಿನ್ನೆಲೆಯಲ್ಲಿ ಸಿಸಿಬಿ ನಿನ್ನೆ ತಡರಾತ್ರಿ ಹೋಟೇಲ್ ಒಂದರ ಮೇಲೆ ದಾಳಿ ನಡೆಸಿದೆ. ಮಾರತ್ ಹಳ್ಳಿ ಔಟರ್ ರಿಂಗ್ ರೋಡ್ ಬಳಿ ಇರುವ ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆದಿದೆ. ಈ ಹೊಟೇಲ್ ನಲ್ಲಿ ಕಾನೂನನ್ನ ಮೀರಿ ಇಂದು ಬೆಳಗಿನ ಜಾವ ಮೂರುವರೆ ವರೆಗೂ ಪಾರ್ಟಿ ನಡೆದಿತ್ತು.
ಡಿಜೆಗಳನ್ನ ಬಳಸಿ ಪಾರ್ಟಿ ಮಾಡ್ತಿದ್ದರು ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿದ ಸಿಸಿಬಿ ತಂಡವನ್ನ ನೋಡಿ ಯುವಕ ಯುವತಿಯರು ಶಾಕ್ ಆಗಿದ್ದರು. ಕೆಲವರು ಹಠಾತ್ ದಾಳಿಯಿಂದ ಪೊಲೀಸರ ಮೇಲೆಯೇ ಕೂಗಾಡಲು ಶುರು ಮಾಡಿದ್ರು. ಬಹುತೇಕರು ನಶೆಯಲ್ಲಿದ್ದರಿಂದ ಸ್ವಲ್ಪ ಮಟ್ಟಿಗೆ ಕಿರಿಕ್ ನಡೆದಿತ್ತು. ಈ ಬಗ್ಗೆ ದಾಳಿ ನಡೆಸಿದ ಸಿಬ್ಬಂದಿಗಳು ಮೊಬೈಲ್ ಶೂಟ್ ಮಾಡಿಕೊಂಡಿದ್ದರು . ಇನ್ನು ದಾಳಿ ವೇಳೆ 64 ಜನ ಯುವಕರು ಹಾಗು 24 ಜನ ಯುವತಿಯರು ಪತ್ತೆಯಾಗಿದ್ದರು. ದಕ್ಷಿಣ ಆಫ್ರೀಕಾದ ವ್ಯಕ್ತಿಯೊಬ್ಬ ಈ ಪಾರ್ಟಿಯನ್ನ ಆಯೋಜನೆ ಮಾಡಿದ್ದನೆಂದು ತಿಳಿದು ಬಂದಿದೆ. ಈ ಹಿಂದೆ ಕೂಡ ಇದೇ ರೀತಿ ಪಾರ್ಟಿಯನ್ನ ಆಯೋಜಿಸಿ ಅದರಲ್ಲಿ ಡ್ರಗ್ ಬಳಕೆಯಾಗಿರುವ ಬಗ್ಗೆ ಈ ಹಿಂದೆ ಮಾಹಿತಿ ಬಂದಿತ್ತು . ಅಂದು ಆ ಆಯೋಜಕ ತಪ್ಪಿಸಿಕೊಂಡಿದ್ದ. ಸದ್ಯ ಅದೇ ಆಯೋಜಕ ಪಾರ್ಟಿಯನ್ನ ಆಯೋಜಿಸಿದ ಹಿನ್ನೆಲೆಯಲ್ಲಿ ಸಿಸಿಬಿ ದಾಳಿ ನಡೆಸಿತ್ತು.
ಇನ್ನು ಈ ಪಾರ್ಟಿಗೆ ಎಂಟ್ರಿ ಫೀಸ್ ಎಂದು ಯುವಕರಿಗೆ 400 ರೂಪಾಯಿ ಯುವತಿಯರಿಗೆ 300 ರೂಪಾಯಿ ಚಾರ್ಜ್ ಮಾಡಿದ್ದ. ಇನ್ನು ದಾಳಿ ನಡೆದಂತಹ ಸಂದರ್ಭದಲ್ಲಿ ಯಾವುದೇ ಡ್ರಗ್ ಪತ್ತೆಯಾಗಿಲ್ಲ. ಆದರೆ ಡ್ರಗ್ ಸೇವನೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೀಗಾಗಿ ಅವರುಗಳನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಇನ್ನು ಸಿಸಿಬಿ ಅಧಿಕಾರಿಗಳು ಯುವಕ ಯುವತಿಯರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗೇ ಓವರ್ ಟೈಂ ಪಾರ್ಟಿ ಆರ್ಗನೈಸ್ ಮಾಡಿದ್ದ ಹೊಟೇಲ್ ಮಾಲೀಕ ವೆಂಕಟೇಶ, ಕ್ಯಾಶಿಯರ್ ಪರಮೇಶ್ವರ, ಡ್ಯಾನಿಯಲ್ ಆಥೆಮ್ , ಶಶಾಂಕ್ ಹಾಗೂ ಆಮನ್ ಬಂಧನವಾಗಿದ್ದು. ಹೆಚ್ ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/04/2022 05:59 pm