ರಾಜಾಜಿನಗರ: ಕಾಮಾಕ್ಷಿಪಾಳ್ಯ ಪೊಲೀಸರು ಬೈಕ್ ಕಳ್ಳ ಶ್ರೀನಿವಾಸ್ ನನ್ನ ಬಂಧಿಸಿದ್ದಾರೆ. ಈತನಿಂದ 10 ಬೈಕ್ ನ ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಟಿವಿಎಸ್ ಮತ್ತು ಹೋಂಡಾ ಆಕ್ಟೀವಾಗಳೇ ಹೆಚ್ಚು. ಅದರ ಒಟ್ಟು ಮೌಲ್ಯ 5 ಲಕ್ಷ 20 ಸಾವಿರ.
ಗುಬ್ಬಿ ಮೂಲದ ಶ್ರೀನಿವಾಸ್ ಕಳ್ಳತನದ ಬಗ್ಗೆ ಗೊತ್ತಾಗಿ ಆತನ ಪತ್ನಿ ಕೂಡ ಬಿಟ್ಟು ಹೋಗಿದ್ದಳು. ನಂತರ ಒಂಟಿಯಾಗಿ ಅಲೆಯುತ್ತಿದ್ದ ಶ್ರೀನಿವಾಸನಿಗೆ ಇಂತಹದ್ದೇ ಆದ ಕೆಲಸ ಇರಲಿಲ್ಲ. ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡವನು ಕದಿಯೋದಕ್ಕೆ ಪ್ಲಾನ್ ಮಾಡಿಕೊಂಡ. ಗ್ರಾಮಾಂತರ ಭಾಗದಲ್ಲಿ ವಾಹನಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನ ಮನಗಂಡ ಶ್ರೀನಿವಾಸ್ ಸೆಕೆಂಡ್ ಹ್ಯಾಂಡ್ ಬೈಕ್ ಕದಿಯಲು ಮುಂದಾಗಿದ್ದ .
ಇನ್ನು ತುಮಕೂರಿನಿಂದ ಬಸ್ ನಲ್ಲಿ ನಗರಕ್ಕೆ ಬರುತ್ತಿದ್ದ ಈತ ಬಳಿಕ ಹಳ್ಳಿಗನಂತೆ ಪಂಚೆ ಹಾಕಿಕೊಂಡು ನಗರವಿಡೀ ಸುತ್ತಾಡುತ್ತಿದ್ದ. ಈತನಿಗೆ ಗೇರ್ ವಾಹನ ಓಡಿಸಲು ಬಾರದ ಹಿನ್ನೆಲೆಯಲ್ಲಿ ಗೇರ್ ಲೆಸ್ ವಾಹನಗಳನ್ನೇ ಹುಡುಕುತ್ತಿದ್ದ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಟಿವಿಎಸ್ ಎಕ್ಸ್ ಎಲ್ ಗೆ ಭಾರಿ ಬೇಡಿಕೆ. ಹೀಗಾಗಿ ಆ ಗಾಡಿಯನ್ನ ಹಗಲಲ್ಲಿ ಗುರುತು ಹಿಡಿದು ರಾತ್ರಿಯಾಗುತ್ತಿದ್ದಂತೆ ರಾಡ್ ಹಿಡಿದು ಹೊರಬರುತ್ತಿದ್ದವನು ವಾಹನಗಳನ್ನ ಕದಿಯದೇ ಊರಿಗೆ ಹೊರಡುತ್ತಿರಲಿಲ್ಲ. ಕದ್ದ ವಾಹನವನ್ನ ಡೈರೆಕ್ಟ್ ಸ್ಟಾರ್ಟ್ ಮಾಡಿದ ಬಳಿಕ ನೇರವಾಗಿ ತುಮಕೂರಿಗೆ ಕೊಂಡೊಯ್ಯುತ್ತಿದ್ದ. ಇನ್ನು ಬರೀ ಟಿವಿಎಸ್ ಗಳೇ ಕಳ್ಳತನವಾಗಿರೋ ದೂರುಗಳು ಬಂದಂತಹ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಇದು ಒಬ್ಬನದೇ ಕೈವಾಡ ಎಂದು ತಿಳಿದು ಸಿಸಿಟಿವಿಗಳನ್ನ ಆಧರಿಸಿ ಆರೋಪಿಯನ್ನ ಬಂಧಿಸಿದ್ದಾರೆ.
PublicNext
09/04/2022 04:21 pm