ಬೆಂಗಳೂರು: ಸ್ನೇಹಿತನ ಮನೆ ಮುಂದೆ ಬೈಕ್ ವ್ಹೀಲಿಂಗ್ ಮಾಡಿದ್ದನ್ನು ತಂದೆಗೆ ಹೇಳಿದ್ದಕ್ಕೆ ಕೊಲೆ ಮಾಡಿರುವ ಘಟನೆ ನಗರದ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.
ಕೆ.ಪಿ.ಅಗ್ರಹಾರದಲ್ಲಿ ಕಳೆದ ವಾರ ಥಾಮಸ್ ನ ಕೊಲೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಸದಾನಂದ ಆ್ಯಂಡ್ ಟೀಂ ಸೂರ್ಯ, ಚಂದನ್, ಪ್ರಮೋದ್, ಯಶವಂತ್, ಹಾಗೂ ಚೇತನ್ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದೆ.
ಪೈಪ್ ಲೈನ್ ನಲ್ಲಿ ವಾಸವಾಗಿದ್ದ ಥಾಮಸ್ ಅನಿಮೇಶನ್ ಕೋರ್ಸ್ ಮಾಡಿಕೊಂಡಿದ್ದ. ಇತ್ತೀಚೆಗೆ ಸ್ವಿಗ್ಗಿ ಕಂಪೆನಿಯಲ್ಲಿ ಕೆಲಸ ಸೇರಿಕೊಂಡಿದ್ದ. ಈತನ ಸ್ನೇಹಿತ ಲಕ್ಷ್ಮೀಕಾಂತ್ ಎಂಬಾತನ ಮನೆ ಮುಂದೆ ಆರೋಪಿಗಳಾದ ಸೂರ್ಯ ಹಾಗೂ ಚಂದನ್ ಬೈಕ್ ವ್ಹೀಲಿಂಗ್ ಮಾಡಿಕೊಂಡು ಪುಂಡಾಟ ನಡೆಸ್ತಿದ್ರು. ಇದರಿಂದ ಅಸಮಾಧಾನಗೊಂಡ ಲಕ್ಷ್ಮೀಕಾಂತ್, ಸ್ನೇಹಿತ ಥಾಮಸ್ ಬಳಿ ಹೇಳಿಕೊಂಡಿದ್ದ.
ಇದೇ ವಿಚಾರಕ್ಕಾಗಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ತದನಂತರ ಥಾಮಸ್, ಚಂದನ್ ತಂದೆಯ ಬಳಿ ಹೋಗಿ ನಡೆದ ವಿಚಾರದ ಬಗ್ಗೆ ಹೇಳಿ, ಬುದ್ಧಿವಾದ ಹೇಳುವಂತೆ ಕೇಳಿಕೊಂಡಿದ್ದ.
ಈ ವಿಚಾರ ತಿಳಿದುಕೊಂಡ ಚಂದನ್, ಸಹಚರರೊಂದಿಗೆ ಥಾಮಸ್ ನ ವಿರುದ್ಧ ಜಗಳಕ್ಕೆ ನಿಂತು ಡ್ರ್ಯಾಗರ್ ಹಾಗೂ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ಮೂವರಿಗಾಗಿ ಕೆ.ಪಿ.ಅಗ್ರಹಾರ ಪೊಲೀಸರು ಶೋಧ ನಡೆಸುತ್ತಿದ್ದಾರೆ.
- ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
18/03/2022 10:42 pm