ದೊಡ್ಡಬಳ್ಳಾಪುರ: ಗಂಡನ ಕುಡಿತದ ಚಟ ಬಿಡಿಸಲು ಆತನ ಫೇಸ್‌ಬುಕ್ ಖಾತೆಯಲ್ಲಿ ತನ್ನದೇ ಫೋಟೋ ಹಾಕಿ RIP ಎಂದು ಬರೆದು ಶ್ರದ್ಧಾಂಜಲಿ ಅರ್ಪಿಸಿದ ಹೆಂಡತಿ ನಾಪತ್ತೆಯಾಗಿದ್ದಾಳೆ. ಅನುಮಾನಾಸ್ಪದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣನ ಹೆಂಡತಿ ಲೀಲಾವತಿ ಫೆಬ್ರವರಿ 24ರಿಂದ ನಾಪತ್ತೆಯಾಗಿದ್ದಾರೆ. ಆಕೆ ನಾಪತ್ತೆಯಾಗುವ ಮುನ್ನ ಗಂಡನ ಫೇಸ್‌ಬುಕ್ ಅಕೌಂಟ್‌ನಲ್ಲಿ ತನ್ನದೇ ಫೋಟೋ ಹಾಕಿ RIP ಎಂದು ಬರೆದು ಶ್ರದ್ಧಾಂಜಲಿ ಅರ್ಪಿಸಿ ನಾಪತ್ತೆಯಾಗಿದ್ದಾಳೆ. ಇದು ಅನುಮಾನಕ್ಕೆ ಕಾರಣವಾಗಿದೆ. ಗಂಡ ಮುನಿಕೃಷ್ಣನನ್ನ ದೊಡ್ಡಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ಕರೆದು ವಿಚಾರಣೆ ಮಾಡಿ ಕಳಿಸಿದ್ದಾರೆ. ಲೀಲಾವತಿ ನಾಪತ್ತೆಯಾಗಿ 12 ದಿನ ಕಳೆದ್ರೂ ಆಕೆಯ ಸುಳಿವು ಸಿಗದೇ ಇರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಗಂಡ ಮುನಿಕೃಷ್ಣ ಮದ್ಯ ವ್ಯಸನಿಯಾಗಿದ್ದು ಆತನ ಕುಡಿತ ಚಟ ಬಿಡಿಸಲು ಲೀಲಾವತಿ ಕುಟುಂಬ RIP ಎಂದು ಬರೆದು ನಾಪತ್ತೆ ನಾಟಕ ಆಡಿದ್ರಾ? ಎಂಬ ಅನುಮಾನ ಸಹ ಇದೆ. ಫೆಬ್ರವರಿ 24ರಂದು ಬೆಳಿಗ್ಗೆ 7:30 ಸಮಯದಲ್ಲಿ ಉದನಹಳ್ಳಿಯಿಂದ ಬಸ್ ನಿಲ್ದಾಣಕ್ಕೆ ಲೀಲಾವತಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಬಂಧಿಕರೂಬ್ಬರು ಆಕೆಯನ್ನ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ನೋಡಿದ್ದಾಗಿ ಹೇಳುತ್ತಿದ್ದಾರೆ. ಲೀಲಾವತಿ ಕುಟುಂಬಕ್ಕೆ ಆಪ್ತರಾಗಿರುವ ಮೈಲಾಪನಹಳ್ಳಿಯ ದೇವರಾಜುರವರೇ ಆಕೆಯನ್ನ ಬೇರೆಡೆ ಇಟ್ಟಿದ್ದಾರೆ. ನನ್ನ ಹೆಂಡತಿ ಮತ್ತೆ ಬಂದರೆ ತುಂಬು ಹೃದಯದಿಂದ ಸ್ವಾಗತಿಸುವೆ ಎಂದು ಮುನಿಕೃಷ್ಣ ಹೆಂಡತಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ.
PublicNext
08/03/2022 10:40 pm