ದೊಡ್ಡಬಳ್ಳಾಪುರ: ಸಂಬಂಧಿಕರ ಆಸ್ತಿ ಕಬಳಿಸಲು ಸಂಚು ನಡೆಸಿದ ಆತ ಪಹಣಿದಾರನನ್ನ ತನ್ನ ತಂದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಆಸ್ತಿಯನ್ನ ತನ್ನ ಹೆಸರಿಗೆ ಮಾಡಿಸಿಕೊಂಡು ಬೇರೆಯವರಿಗೆ ಮಾರಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾಪುರ ಗ್ರಾಮದ ಪಿಳ್ಳಪ್ಪ ಎಂಬುವರಿಗೆ ಸರ್ವೆ ನಂಬರ್ 51/1 ರಲ್ಲಿ 2 ಎಕರೆ 12 ಗುಂಟೆ ಜಮೀನು ಇರುತ್ತೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪಿಳ್ಳಪ್ಪನವರ ಮಕ್ಕಳು ನಡುವೆ ಜಗಳವಿತ್ತು. ಹೀಗಾಗಿ ಪಿಳ್ಳಪ್ಪನವರ ನಿಧನ ನಂತರ ಮಕ್ಕಳ ಹೆಸರಿಗೆ ಪಾವತಿ ಖಾತೆ ಆಗಿರಲಿಲ್ಲ. ಇದರ ಸುಳಿವು ಅರಿತ ಮಂಜುನಾಥ್, ಆಸ್ತಿ ಹೊಡೆಯುವ ಸಂಚು ನಡೆಸಿದ.
ಪಿಳ್ಳಪ್ಪ ತನ್ನ ತಂದೆಯೆಂದು ನಕಲಿ ವಂಶವೃಕ್ಷ ಸೃಷ್ಟಿಸಿದ ಮಂಜುನಾಥ್, ಪಿಳ್ಳಪ್ಪನವರ ಮಕ್ಕಳ ಗಮನಕ್ಕೂ ತರದೆ
2019 ರಲ್ಲಿ ತನ್ನ ಹೆಸರಿಗೆ ಪಾವತಿ ಖಾತೆ ಮಾಡಿಸಿಕೊಂಡ, 2022 ಜನವರಿ 21 ರಂದು ಬೆಂಗಳೂರು ಮೂಲದ ಸಲ್ಮಾನ್ ದಾವೂದ್ ಗೆ 24 ಲಕ್ಷ ರೂಪಾಯಿ ಮಾರಾಟ ಮಾಡಿದ್ದಾನೆ.
ಸಿ.ಮಂಜುನಾಥ್ ಅಸಲಿ ತಂದೆಯ ಹೆಸರು ಚಿಕ್ಕಮುನಿಯಪ್ಪ, ಶಾಲಾ ದಾಖಲಾತಿ ಮತ್ತು ಮತದಾನದ ಗುರುತಿನ ಚೀಟಿಯಲ್ಲಿ ಮಂಜುನಾಥ್ ತಂದೆ ಚಿಕ್ಕಮುನಿಯಪ್ಪ ಎಂದು ನಮೂದಾಗಿದ್ದು, ಆಸ್ತಿಗಾಗಿ ಮಂಜುನಾಥ್ ತಂದೆಯ ಹೆಸರು ಬದಲಾಯಿಸಿರುವುದು ಸಾಕ್ಷ್ಯ ಇದ್ದು, ಮಂಜುನಾಥ್ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ನೀಡಲಾಗಿದೆ. ಇಷ್ಟೆಲ್ಲ ಸಾಕ್ಷಿ ಇದ್ದರೂ ಪೊಲೀಸರು ಪ್ರಕರಣ ದಾಖಲು ಮಾಡದೆ ಇರುವುದು ಸಹ ಅನುಮಾನಕ್ಕೆ ಕಾರಣವಾಗಿದೆ.
Kshetra Samachara
28/02/2022 02:40 pm