ಬೆಂಗಳೂರು: ಪ್ರೇಯಸಿ ಕೊಲೆ ಯತ್ನ ಆರೋಪ ಸಾಬೀತಾದ ಹಿನ್ನೆಲೆ ಮಾಜಿ ಪೊಲೀಸ್ ಕಾನ್‌ಸ್ಟೇಬಲ್‌ಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡು ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಕುಶಾಲನಗರದ ಅನಿಲ್ ಕುಮಾರ್ ಅಲಿಯಾಸ್ ರಾಹುಲ್ ಶಿಕ್ಷೆಗೆ ಒಳಗಾಗಿರುವ ಮಾಜಿ ಪೊಲೀಸ್ ಕಾನ್‌ಸ್ಟೇಬಲ್.
ಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದ ಅನಿಲ್ 2008ರಲ್ಲಿ ಬ್ಯೂಟಿಷಿಯನ್ ಒಬ್ಬಳ ಸ್ನೇಹ ಮಾಡಿ ಬಳಿಕ ಪ್ರೀತಿ ಬೆಳೆಸಿಕೊಂಡಿದ್ದ. ನಂತರ ಮದುವೆ ವಿಚಾರ ಬಂದಾಗ ಯುವತಿಯಿಂದ ದೂರವಾಗಲು ಅನಿಲ್ ಮುಂದಾಗಿದ್ದ. ಈ ಕುರಿತು ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಸಮಯದಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದೇನೆಂದು ಮದುವೆಗೆ ಒಪ್ಪಿಸಿದ್ದ. ಇದಾದ ಸ್ವಲ್ಪ ದಿನದ ಬಳಿಕ ಆತ ಇಲಾಖೆಯಿಂದ ವಜಾಗೊಂಡಿದ್ದ. ಹಾಗೂ ಮೊದಲ ಪತ್ನಿಗೂ ವಿಚ್ಛೇದನ ನೀಡಿಲ್ಲ ಎಂಬ ಮಾಹಿತಿ ತಿಳಿದ ಯುವತಿ ಆತನಿಂದ ದೂರವಾಗಿದ್ದಳು.
2011ರಲ್ಲಿ ಯುವತಿ ಸ್ನೇಹಿತ ನವೀನ್ ಜೊತೆ ಅನಿಲ್ ಮನೆಗೆ ಹೋಗಿದ್ದಳು. ಈ ವೇಳೆ ಅನಿಲ್, ಯುವತಿಯ ಎದೆ, ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ 10 ಬಾರಿ ಇರಿದು ಕೊಲೆಗೆ ಯತ್ನಿಸಿದ್ದ. ರಕ್ಷಣೆಗೆ ಧಾವಿಸಿದ ಇನ್ನೊಬ್ಬ ವ್ಯಕ್ತಿ ಮೇಲೂ ಅನಿಲ್ ಹಲ್ಲೆ ನಡೆಸಿದ್ದ. ಇದೀಗ ಈ ಪ್ರಕರಣದ ತೀರ್ಪು ಬಂದು ಅಪರಾಧಿ ಶಿಕ್ಷೆಯಾಗಿದೆ.
PublicNext
18/02/2022 10:50 am