ಬೆಂಗಳೂರು: ದೇವಸ್ಥಾನಕ್ಕೆ ಕಳ್ಳತನಕ್ಕಾಗಿ ಬಂದ ಕಳ್ಳನೊಬ್ಬ, ದೇವರ ದರ್ಶನ ಪಡೆದು ವಾಪಸ್ಸಾಗಿರೋ ಅಚ್ಚರಿ ಘಟನೆ ನಡೆದಿದೆ. ಮಧ್ಯರಾತ್ರಿ ಬಳಿಕ ಬಾಗಿಲು ಒಡೆದು ದೇವಸ್ಥಾನದ ಒಳಗೆ ನುಗ್ಗಿದ ಖದೀಮ, ದೋಚಲು ಮುಂದಾಗಿದ್ದ. ಆದ್ರೆ, ಅದೇನಾಯ್ತೋ ಏನೋ ದೇವರ ಗರ್ಭಗುಡಿಗೆ ಹೋಗಿ ಸ್ವಲ್ಪ ಸಮಯ ಕಳೆದ. ಅಲ್ಲಿ ಏನನ್ನೂ ಮುಟ್ಟದೆ ಕಳ್ಳ ವಾಪಸ್ ಆಗಿದ್ದಾನೆ!
ತಾವರಕೆರೆ ಆರ್ ಬಿಐ ಲೇಔಟ್ ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಈ ಸೋಜಿಗ ನಡೆದಿದ್ದು, ತಡರಾತ್ರಿ 2 ಗಂಟೆಗೆ ಗರ್ಭಗುಡಿ ಚಿಲಕವನ್ನು ರಾಡ್ ನಿಂದ ಒಡೆದು ಒಳ ಹೋಗಿದ್ದಾನೆ. ಆದ್ರೆ, ದೇವರ ಮೂರ್ತಿ ಮೇಲಿನ ಅಭರಣ, ಹುಂಡಿ ಹಣ ಸಹಿತ ಯಾವುದನ್ನೂ ಮುಟ್ಟದೆ ಸ್ವಲ್ಪ ಸಮಯ ಗರ್ಭಗುಡಿಯಲ್ಲಿದ್ದು ವಾಪಸ್ಸಾಗಿದ್ದಾನೆ.
ಈತ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದು ಕಳ್ಳತನಕ್ಕೋ ಅಥವಾ ಬೇರೆ ಕಾರ್ಯಕ್ಕೋ ಅನ್ನೋದು ಗೊತ್ತಾಗಿಲ್ಲ.
ಈತನ ಓಡಾಟ ಸಿಸಿ ಟಿ.ವಿ. ಯಲ್ಲಿ ಸೆರೆಯಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯು ತಾವರೆಕೆರೆ ಪೊಲೀಸರಿಗೆ ಮಾಹಿತಿ ನೀಡಿ ಈ ಅಪರಿಚಿತನ ಪತ್ತೆ ಮಾಡುವಂತೆ ಮನವಿ ಮಾಡಿದೆ.
PublicNext
06/02/2022 02:25 pm