ರಾಮನಗರ: ರವಿಶಂಕರ್ ಗುರೂಜಿ ಆಶ್ರಮದ ಆಯುರ್ ಕಂಪನಿ ಮ್ಯಾನೇಜರ್ ಈಶ್ವರ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಇದಕ್ಕೆಲ್ಲ ಕಾರಣ ಜಯನಗರ ಎಸಿಪಿ ಶ್ರೀನಿವಾಸ್ ಎಂಬುದು ಮೃತ ಈಶ್ವರ್ ಸಹೋದರ ರೇವಣಸಿದ್ದೇಶ್ವರ ಕುಂತಿಮಠ ಕಗ್ಗಲಿಪುರ ಠಾಣೆಗೆ ದೂರು ನೀಡಿದ್ದಾರೆ.
ಈಶ್ವರ್, ಸಾವಿಗೂ ಮುನ್ನ 14 ಪುಟಗಳ ಡೆತ್ ನೋಟ್ ಬರೆದಿದ್ದು, ಅದ್ರಲ್ಲಿ ಎಸಿಪಿ ಶ್ರೀನಿವಾಸ್ ವಿರುದ್ಧವೂ ಬರೆದಿದ್ದಾರೆ ಎನ್ನಲಾಗ್ತಿದೆ. ಕೆಲವು ಡೆತ್ ನೋಟ್ಸ್ ಪಬ್ಲಿಕ್ ನೆಕ್ಸ್ಟ್ ಗೂ ಲಭ್ಯವಾಗಿದೆ. ಆದ್ರೆ, ಅದ್ರಲ್ಲಿ ಎಲ್ಲೂ ಸಾವಿಗೆ ಕಾರಣ ಯಾರೆಂದು ನೇರವಾಗಿ ಆರೋಪಿಸಿಲ್ಲ.
ಜ. 20ರಂದು ಈಶ್ವರ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದರು. 20 ವರ್ಷಗಳ ಹಿಂದೆ ಈಶ್ವರ್ , ರಶ್ಮಿ ಎಂಬಾಕೆಯನ್ನು ಪ್ರೀತಿಸಿ ಕುಟುಂಬದ ಒಪ್ಪಿಗೆಯಂತೆ ಮದುವೆಯಾಗಿದ್ದರು. 18 ವರ್ಷದ ಮಗಳಿದ್ದು, ಈ ಮಧ್ಯೆ ಇಬ್ಬರ ನಡುವೆ ಒಡಕು ಮೂಡಿದೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡುವಂತೆ ರಶ್ಮಿ ಒತ್ತಾಯಿಸಿದ್ದಳು. ಇದಕ್ಕೆ ಒಪ್ಪದಿದ್ದಾಗ ರಶ್ಮಿ ಎಸಿಪಿ ಕಚೇರಿಗೆ ದೂರು ಕೊಟ್ಟಳು.
ಈ ಹಿನ್ನೆಲೆ ಜ.17ರಂದು ಜಯನಗರ ಎಸಿಪಿ ಶ್ರೀನಿವಾಸ್, ಕಾನ್ ಸ್ಟೇಬಲ್ ಅಜ್ಜಪ್ಪಣ್ಣರನ್ನು ಈಶ್ವರ್ ಮನೆಗೆ ಕಳುಹಿಸಿ ಠಾಣೆಗೆ ಬರಲು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಜ.19ರಂದು ವಕೀಲರ ಮೂಲಕ ಈಶ್ವರ್, ಎಸಿಪಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪತ್ನಿ ರಶ್ಮಿ, ಆಕೆ ಸಹೋದರ ಬಸವರಾಜ್, ತಂಗಿ ರೂಪಾ ಈಶ್ವರ್ ರನ್ನು ನಿಂದಿಸಿ, ಅವಮಾನಿಸಿ, ವಿಚ್ಛೇದನಕ್ಕೆ ಸಹಿ ಹಾಕುವಂತೆ ಬೆದರಿಸಿದ್ದಾರೆಂದು ಆರೋಪಿಸಲಾಗಿದೆ.
ಈ ಒತ್ತಡದಿಂದ ನನ್ನ ಸಹೋದರ ಮಾನಸಿಕ ಖಿನ್ನತೆಗೊಳಗಾಗಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿದ್ದಾನೆ ಎಂದು ಈಶ್ವರ್ ಸಹೋದರ ಆರೋಪಿಸಿದ್ದಾರೆ.
ಆದ್ರೆ, ಪೊಲೀಸ್ರು ಮಾತ್ರ ಪತ್ನಿಯ ಕಿರುಕುಳದಿಂದ ಈಶ್ವರ್ ಆತ್ಮಹತ್ಯೆಗೈದಿದ್ದಾರೆ. ಎಸಿಪಿ ಶ್ರೀನಿವಾಸ್ ದೂರು ಬಂದ ಹಿನ್ನೆಲೆ ಕರೆಸಿ ವಿಚಾರಣೆ ನಡೆಸಿದ್ದಾರೆ ಅಷ್ಟೇ ಎಂದಿದ್ದಾರೆ. ಈ ಬಗ್ಗೆ ರಾಮನಗರ ಎಸ್ಪಿ ಸಂತೋಷ್ ಬಾಬು ಪ್ರತಿಕ್ರಿಯಿಸಿದ್ದು, ವಿಚಾರಣೆ ನಡೆಸೋದಾಗಿ ತಿಳಿಸಿದ್ದಾರೆ.
Kshetra Samachara
27/01/2022 07:31 pm