ಬೆಂಗಳೂರು: ಕನ್ನಡ ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ಸೆನ್ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ವಿಜಯಕುಮಾರ್ ಬಂಧಿತ ಆರೋಪಿ. ವಿಜಯಕುಮಾರ್ ಮ್ಯಾಟ್ರಿಮೋನಿ ಮುಖಾಂತರ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ, ಇಬ್ಬರು ಆಗಾಗ ಭೇಟಿಯಾಗಿ ಕೆಲ ದಿನಗಳ ಬಳಿಕ ಮದುವೆಯಾಗುವ ಒಪ್ಪಂದಕ್ಕೆ ಬಂದಿದ್ದರು. ಈ ವೇಳೆ ವಿಜಯ್ ಯುವತಿಯೊಂದಿಗೆ ಇರುವ ಖಾಸಗಿ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡಿದ್ದ. ಬಳಿಕ ಇದೇ ಫೋಟೋಗಳನ್ನೇ ಇಟ್ಟುಕೊಂಡೇ ಯುವತಿಗೆ ಹಣ ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾನೆ. ಇದಕ್ಕೆ ಸೊಪ್ಪು ಹಾಕದಿದ್ದಕ್ಕೆ ಯುವತಿಯ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದ. ಇದರಿಂದ ಆತಂಕಗೊಂಡ ಯುವತಿಯು ಆರೋಪಿಗೆ 50 ಸಾವಿರ ರೂಪಾಯಿ ನೀಡಿ, ನಕಲಿ ಖಾತೆ ಡಿಲೀಟ್ ಮಾಡುವಂತೆ ಹೇಳಿದರೂ ಮತ್ತೆ ಹೆಚ್ಚು ಹಣ ನೀಡುವಂತೆ ಬೆದರಿಸುತ್ತಿದ್ದನಂತೆ.
ಹಣ ನೀಡದಿದ್ದರೆ ಕುಟುಂಬಸ್ಥರಿಗೆ ಹಾಗೂ ಸಂಬಂಧಿಕರ ಪ್ರೋಫೈಲ್‌ಗಳಿಗೆ ಫೋಟೋಗಳನ್ನು ಟ್ಯಾಗ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದರಿಂದ ಬೇಸತ್ತ ಯುವತಿ ಈಶಾನ್ಯ ವಿಭಾಗ ಸೆನ್ ಪೊಲೀಸರಿಗೆ ದೂರು ನೀಡಿದ್ದಳು. ದೂರಿನನ್ವಯ ಸೆನ್ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Kshetra Samachara
20/01/2022 12:04 pm