ಯಲಹಂಕ : ಶಾಸಕ ಎಸ್. ಆರ್. ವಿಶ್ವನಾಥ್ ಅವರ ಕೊಲೆಗೆ ಸ್ಕೆಚ್ ಹಾಕಿರುವ ವೀಡಿಯೊ ಬಹಿರಂಗವಾಗಿದ್ದು, ಇದಕ್ಕೆ ಸಂಬಂಧಿಸಿ ಖುದ್ದು ಶಾಸಕ ಎಸ್. ಆರ್. ವಿಶ್ವನಾಥ್ ಅವರು ರಾಜಾನುಕುಂಟೆ ಪೊಲೀಸ್ ಠಾಣೆಗೆ ಬಂದು ತನ್ನ ಕೊಲೆಗೆ ಸಂಚು ನಡೆಸಿದ ಗೋಪಾಲಕೃಷ್ಣ ಮತ್ತು ಆತನ ಸ್ನೇಹಿತರ ವಿರುದ್ಧ ದೂರು ನೀಡಿದ್ದಾರೆ.
ಯಲಹಂಕ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಚುನಾಯಿತರಾಗಿದ್ದ ಅವರು ಸದ್ಯ ಬಿಡಿಎ ಅಧ್ಯಕ್ಷರೂ ಆಗಿದ್ದಾರೆ.
ಎಡಿಟ್ ಮಾಡಲಾದ ವೀಡಿಯೊದಲ್ಲಿ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಯಾಗಿದ್ದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಕೊಲೆ ಮಾಡುವುದಾಗಿ ಹೇಳಿದ್ದಾರೆ. ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡು ಸಂಚು ನಡೆಸಿದ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೀಡಿಯೊದಲ್ಲಿ ಗೋಪಾಲ ಕೃಷ್ಣರನ್ನು ಪ್ರಚೋದಿಸುವ ಕುಳ್ಳ ದೇವರಾಜ್ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದ ವಿಶ್ವನಾಥ್ ನನ್ನು ಮುಗಿಸಿ ಎಂದಿದ್ದ ಮತ್ತು ವೀಡಿಯೊ ಸಹ ಮಾಡಿದ್ದ. ಆರು ತಿಂಗಳ ನಂತರ ಎಡಿಟ್ ಮಾಡಲಾದ ವೀಡಿಯೊ ಬಯಲಿಗೆ ಬಂದಿದ್ದು, ಸಿಸಿಬಿ ಪೊಲೀಸರು ಕುಳ್ಳ ದೇವರಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
'ಪೊಲೀಸರು ದೂರನ್ನು ಸ್ವೀಕರಿಸಿದ್ದು, ವಿಚಾರಣೆ ನಂತರ ಪ್ರಕರಣ ದಾಖಲಿಸಲಾಗುವುದು ಮತ್ತು ವಿಚಾರಣೆಗಾಗಿ ಅನ್ ಎಡಿಟೆಡ್ ವೀಡಿಯೊ ವಶಕ್ಕೆ ಪಡೆಯಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ತಿಳಿಸಿದ್ದಾರೆ.
ಶಾಸಕ ಎಸ್. ಆರ್. ವಿಶ್ವನಾಥ್ ಹತ್ಯೆಗೆ ಸಂಚು ನಡೆಸಿರುವ ಹಿನ್ನೆಲೆಯಲ್ಲಿ ಸಿಂಗನಾಯಕನ ಹಳ್ಳಿಯ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Kshetra Samachara
01/12/2021 08:14 pm