ಬೆಂಗಳೂರು: ಆ ಕಂಪನಿ ಪ್ರತಿಷ್ಠಿತ ಕೈಗಾರಿಕಾ ಪ್ರದೇಶದಲ್ಲಿದ್ದರೂ ಯಾವುದೇ ಅನುಮತಿ ಪಡೆದಿರಲಿಲ್ಲ. ಜೊತೆಗೆ ಪಕ್ಕದಲ್ಲಿದ್ದ ಕೆರೆಗೆ ತ್ಯಾಜ್ಯ ನೀರನ್ನು ಬಿಟ್ಟು ಸಾವಿರಾರು ಮೀನುಗಳ ಸಾವಿಗೆ ಕಾರಣವಾಗಿದೆ. ಇದೀಗ ದೂರು ಬಂದ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೀನಿನ ಉತ್ಪನ್ನ ಶೇಖರಿಸಿ, ಪ್ಯಾಕಿಂಗ್ ಮಾಡುತ್ತಿರುವ ಸಿಬ್ಬಂದಿ, ಮತ್ತೊಂದೆಡೆ ಏಕಾಏಕಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು...
ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಇನ್ಫಿ ಫ್ರೆಶ್ ಫುಡ್ಸ್ ಪ್ರೈ. ಲಿ. ಕಂಪನಿ.
ಈ ಕಂಪನಿ ಮಾಲೀಕರು ಹಲವು ದಿನಗಳಿಂದ ಬೊಮ್ಮಸಂದ್ರ ಕೈಗಾರಿಕೆ ಪ್ರದೇಶದಲ್ಲಿ ಘಟಕ ಪ್ರಾರಂಭಿಸಿದ್ದು, ಮೀನು ಪ್ಯಾಕಿಂಗ್ ಮಾಡಿ ಹಲವು ಪ್ರದೇಶಗಳಿಗೆ ಡೆಲಿವರಿ ಮಾಡುತ್ತಿವೆ.
ಆದರೆ, ಈ ಕಂಪನಿ ಮಾಲೀಕ ಇದುವರೆಗೂ ಸ್ಥಳೀಯ ಪುರಸಭೆ, ಬೊಮ್ಮಸಂದ್ರ ಕೈಗಾರಿಕಾ ಅಸೋಸಿಯೇಶನ್, ಮಾಲಿನ್ಯ ನಿಯಂತ್ರಣ ಮಂಡಳಿ ಸಹಿತ ಯಾವುದೇ ನಿಗಮಗಳ ಅನುಮತಿ ಪಡೆದಿರಲಿಲ್ಲ! ಜೊತೆಗೆ ಕಲುಷಿತ ನೀರನ್ನು ಬೊಮ್ಮಸಂದ್ರ ಕೆರೆಗೆ ಬಿಟ್ಟು ಸುಮಾರು 50 ಸಾವಿರ ಮೀನುಗಳ ಸಾವಿಗೆ ಕಾರಣವಾಗಿದೆ.
ಹಾಗಾಗಿ ಕಂಪನಿ ಮಾಲೀಕರ ವಿರುದ್ಧ ಬೊಮ್ಮಸಂದ್ರ ಕೈಗಾರಿಕಾ ಅಸೋಸಿಯೇಶನ್ ಅಧ್ಯಕ್ಷ ಪ್ರಸಾದ್ ದೂರು ನೀಡಿದ್ದರಿಂದ ಇಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಕಂಪನಿಗೆ ದಾಳಿ ಮಾಡಿ, ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
Kshetra Samachara
25/11/2021 09:36 am