ಬೆಂಗಳೂರು: ಫೇಸ್ ಬುಕ್ ಮೂಲಕ ಮನೆಗೆಲಸಕ್ಕೆ ಜನರಿದ್ದಾರೆ ಅಂತ ಜಾಹೀರಾತು ನೀಡ್ತಿದ್ದ ಮಹಿಳೆಯರು ಮನೆ ಮಾಲೀಕರನ್ನ ಸಂಪರ್ಕ ಮಾಡ್ತಿದ್ರು. ಇದಾದ ಕೆಲ ಸಮಯದಲ್ಲೇ ಮನೆಗೆಲಸಕ್ಕೆ ಸೇರ್ತಿದ್ರು. ಕೆಲವೇ ದಿನಗಳಲ್ಲಿ ಮಾಲೀಕರು ಇಲ್ಲದಿರುವ ಸಮಯ ನೋಡಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು. ಸದ್ಯ ಈ ಖತರ್ನಾಕ್ ಮುಂಬಯಿ ಲೇಡಿ ಗ್ಯಾಂಗ್ ನ್ನ ಹೆಣ್ಣೂರು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಮುಂಬಯಿ ಮೂಲದ ವನಿತಾ, ಮಹಾದೇವಿ, ಪ್ರಿಯಾಂಕ ಬಂಧಿತ ಕಳ್ಳಿಯರಾಗಿದ್ದು, ಇವರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ ಮಹಾರಾಷ್ಟ್ರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ 37 ಪ್ರಕರಣ ದಾಖಲಾಗಿದ್ದು ಜೈಲಿಗೂ ಹೋಗಿ ಜಾಮೀನಿನಲ್ಲಿ ಬಿಡುಗಡೆಗೊಂಡು ಮತ್ತದೇ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಕಳೆದ ತಿಂಗಳು ನಗರಕ್ಕೆ ಬಂದಿದ್ದ ಮಹಿಳೆಯರು ಫೇಸ್ ಬುಕ್ ನ ರೆಫರ್ ಹೌಸ್ ಮೇಡ್ಸ್ ಬೆಂಗಳೂರು ಪಬ್ಲಿಕ್ ಗ್ರೂಪ್ ನಲ್ಲಿ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಮೊಬೈಲ್ ನಂ. ಹಾಕಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಆರೋಪಿಗಳ ಪೈಕಿ ಮಹಾದೇವಿ ಪೋಸ್ಟ್ ಹಾಕಿದ್ದಳು. ಇದನ್ನು ನೋಡಿ ಹೆಣ್ಣೂರಿನ ಅರವಿಂದ್ ಎಂಬವರು ಸಂಪರ್ಕಿಸಿದ್ದರು. ಇದರಂತೆ 3 ದಿನ ಕೆಲಸ ಮಾಡಿ ಬಳಿಕ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ನೋಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ವಸಂತ್ ಕುಮಾರ್ ತಂಡ ಸಿಸಿ ಟಿವಿ, ಮೊಬೈಲ್ ನಂಬರ್ ಆಧಾರದಂತೆ ಮುಂಬಯಿನಲ್ಲಿ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಚಾರಣೆ ವೇಳೆ ಫೇಸ್ ಬುಕ್ ಗ್ರೂಪ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವಳು ಎಂದು ಮಹಾದೇವಿ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದಳು! ಪೋಸ್ಟ್ ನಲ್ಲಿ ಹಾಕಿದ್ದ ನಂಬರ್, ಕದ್ದ ಮೊಬೈಲ್ ನಂ. ಆಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾ ಶಂಕರ್ ಗುಳೇದ್ ತಿಳಿಸಿದ್ದಾರೆ.
ಮೊದಲಿಗೆ ಫೇಸ್ ಬುಕ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದ ಇವರು ನಂತರ ಗ್ರೂಪ್ ಕ್ರಿಯೇಟ್ ಮಾಡಿ ಮನೆ ಕೆಲಸದವರು ಬೇಕಾದರೆ ಸಂಪರ್ಕಿಸಿ ಅಂತ ಪೋಸ್ಟ್ ಹಾಕುತ್ತಿದ್ದರು. ಈ ಗ್ಯಾಂಗ್, ಈ ಹಿಂದೆ ಮುಂಬಯಿನಲ್ಲಿ ಹಲವು ಕಡೆ ಕೈ ಚಳಕ ತೋರಿ ಅಂದರ್ ಅಗಿದ್ದರು.
ಮನೆ ಕೆಲಸದವರಿಂದ ಕಳ್ಳತನವಾಯ್ತು ಅಂದ್ರೆ ಮುಂಬಯಿ ಪೊಲೀಸರು ಮೊದಲು ಹುಡುಕುತ್ತಿದ್ದದ್ದು ಇವರನ್ನೇ. ಅಲ್ಲಿ ಸೆಕ್ಯೂರಿಟಿ ಗಾರ್ಡ್ ಗೆ ಕಮಿಷನ್ ಕೊಟ್ಟು ಮನೆಕೆಲಸಕ್ಕೆ ಸೇರುತ್ತಿದ್ದ ಗ್ಯಾಂಗ್ ,ಇಲ್ಲಿಯೂ ಅದೇ ಚಾಳಿ ಮುಂದುವರೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
PublicNext
11/07/2022 06:19 pm