ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಆರತಿ ಹೊತ್ತ ದಲಿತ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ- ಇನ್ನೂ ಜೀವಂತ ಅಸ್ಪೃಶ್ಯತೆ ಆಚರಣೆ!

ದೊಡ್ಡಬಳ್ಳಾಪುರ: ನಗರ ಕೇಂದ್ರದಿಂದ ಕೇವಲ 3 ಕಿ.ಮೀ. ಅಂತರದಲ್ಲಿರುವ ಮಲ್ಲಾತಹಳ್ಳಿ ಗ್ರಾಮದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ! ಇಲ್ಲಿನ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶವಿಲ್ಲ. ಬಾಗಿಲಲ್ಲೇ ನಿಂತು ದೇವರಿಗೆ ಕೈ ಮುಗಿಯ ಬೇಕು. ದಲಿತರ ಪೂಜಾ ಸಾಮಗ್ರಿಗಳನ್ನು ಸಹ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಕಾಂಪೌಂಡ್ ಹೊರಗಡೆಯ ದೇವರಿಗೆ ಹಣ್ಣುಕಾಯಿ ಕೊಟ್ಟು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.

ಬಹಳ ಹಿಂದಿನಿಂದಲೂ ಮಲ್ಲಾತಹಳ್ಳಿ ಗ್ರಾಮದಲ್ಲಿ ಸವರ್ಣೀಯರು ಅಸ್ಪೃಶ್ಯತೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಹಳೆ ತಲೆಮಾರಿನ ದಲಿತರು ಇದ್ಯಾವುದನ್ನು ಪ್ರಶ್ನೆ ಮಾಡದೇ ತಮ್ಮ ಮೇಲಿನ ದೌರ್ಜನ್ಯಗಳನ್ನು ಸಹಿಸಿಕೊಂಡಿದ್ದರು. ಆದರೆ, ಇವತ್ತಿನ ವಿದ್ಯಾವಂತ ಯುವಜನರು, ದಲಿತರ ಮೇಲೆ ಸವರ್ಣೀಯರು ನಡೆಸುತ್ತಿರುವ ಅಸ್ಪೃಶ್ಯತೆ ಆಚರಣೆಯನ್ನು ಪ್ರಶ್ನೆ ಮಾಡಲು ಪ್ರಾರಂಭಿಸಿದ್ದಾರೆ. ಇದೇ ಇವತ್ತು ಗ್ರಾಮದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ ಚನ್ನಕೇಶವ, ಮದ್ದೂರಮ್ಮ, ಗಂಗಮ್ಮ ಮತ್ತು ಮಾರಮ್ಮ ದೇವಸ್ಥಾನಗಳು ಸುಮಾರು 40 ವರ್ಷಗಳ ಹಿಂದಿನವು. ವರ್ಷದ ಹಿಂದೆ ಈ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿತ್ತು. 15 ದಿನಗಳ ಹಿಂದೆ ಗ್ರಾಮದಲ್ಲಿ ಸಭೆ ಮಾಡಿದ ದಲಿತರು ಮತ್ತು ಸವರ್ಣೀಯರು, ಗಂಗಮ್ಮ, ಮದ್ದೂರಮ್ಮ ಮತ್ತು ಚನ್ನಕೇಶವ ದೇವರಿಗೆ ದೀಪಾವಳಿ ಹಬ್ಬದಂದ್ದು ಆರತಿ ಮಾಡುವ ಬಗ್ಗೆ ಮಾತುಕತೆ ಮಾಡಿದ್ದಾರೆ.

ಶುಕ್ರವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ದಲಿತ ಮಹಿಳೆಯರು ಆರತಿಗಳನ್ನು ಹೊತ್ತುಕೊಂಡು ಚನ್ನಕೇಶವ, ಮದ್ದೂರಮ್ಮ ದೇವಸ್ಥಾನದ ಬಳಿ ಹೋದಾಗ, ಸವರ್ಣೀಯ ಮಹಿಳೆಯರ ಆರತಿ ಹಿಂದೆ ದಲಿತ ಮಹಿಳೆಯರು ಬರುವಂತೆ ಹೇಳಿದ್ದಾರೆ. ಬಳಿಕ ದೇವಸ್ಥಾನದ ಕಾಂಪೌಂಡ್ ನಲ್ಲಿಯೇ ತಡೆದು ದೇವಸ್ಥಾನದ ಒಳಗೆ ಬಾರದಂತೆ ತಾಕೀತು ಮಾಡಿದ್ದಾರೆ.

ಈ ಬಗ್ಗೆ ಪ್ರಶ್ನೆ ಮಾಡುತ್ತಲೇ ಒಳ ಹೋಗಲು ಪ್ರಯತ್ನಿಸಿದಾಗ ಕಾಂಪೌಂಡ್ ಗೆ ಬೀಗ ಹಾಕಿ, ದೇವಸ್ಥಾನದ ಕಾಂಪೌಂಡ್ ಹೊರಗೇ ನಿಂತು ದೇವರ ಪೂಜೆ ಮಾಡಿಕೊಂಡು ಹೋಗುವಂತೆ ಗದರಿಸಿದ್ದಾರೆ! ಇವತ್ತಿನ ಅತ್ಯಾಧುನಿಕ ಕಾಲದಲ್ಲೂ ಅಸ್ಪೃಶ್ಯತೆಯ ಆಚರಣೆ ನಡೆಯುತ್ತಿರುವುದು ಮನಸ್ಸಿಗೆ ತುಂಬಾ ನೋವು ತರುತ್ತಿದೆ ಎಂದು ದಲಿತ ಯುವಕ ಅಶೋಕ್ ತಮ್ಮ ಮನದ ಬೇನೆ- ಸಂಕಟ ಹಂಚಿಕೊಂಡರು.

Edited By : Ashok M
PublicNext

PublicNext

02/11/2024 08:12 pm

Cinque Terre

38.79 K

Cinque Terre

4

ಸಂಬಂಧಿತ ಸುದ್ದಿ