ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಹಿಳೆಗೆ ಚಿನ್ನಾಭರಣ ವಂಚನೆ ಪ್ರಕರಣ - ಐಶ್ವರ್ಯಗೌಡ ಮನೆಯನ್ನ ತಲಾಶ್ ನಡೆಸಿದ ಆರ್.ಆರ್.ನಗರ ಪೊಲೀಸರು

ಬೆಂಗಳೂರು: ಮಾಜಿ ಸಂಸದ ಡಿ.ಕೆ ಸುರೇಶ್ ಸಹೋದರಿ ಸೋಗಿನಲ್ಲಿ ಮಹಿಳೆಗೆ 3.25 ಕೋಟಿ ವಂಚನೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಆರ್.ಆರ್.ನಗರ ಪೊಲೀಸರು ಸರ್ಚ್ ವಾರೆಂಟ್ ಪಡೆದು ಆರೋಪಿತೆ ಐಶ್ವರ್ಯಗೌಡ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.

3.25 ಕೋಟಿ ರೂ.ನಗದು ಹಾಗೂ 430 ಗ್ರಾಂ ಚಿನ್ನಾಭರಣ ವಂಚಿಸಿರುವುದಾಗಿ ಆರೋಪಿಸಿ ಶಿಲ್ಪಾಗೌಡ ಎಂಬುವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಇಂದು ಆರೋಪಿತೆ ಐಶ್ವರ್ಯಗೌಡ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.

ತಪಾಸಣೆ ವೇಳೆ ಮಹತ್ವದ ದಾಖಲಾತಿಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ನಾಳೆ ವಿಚಾರಣೆ ಬರುವಂತೆ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರ್.ಆರ್.ನಗರ ನಿವಾಸಿಯಾಗಿರುವ ದೂರುದಾರ ಮಹಿಳೆ ಶಿಲ್ಪಾಗೌಡಳಿಗೆ ವಂಚನೆವೆಸಗಿದ ಸ್ಥಳ ತೋರಿಸಬೇಕು. ಸಾಕ್ಷಿದಾರರನ್ನ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನ ಇನ್ನೆರಡು ದಿನದೊಳಗೆ ಬಂದು ಹಾಜರುಪಡಿಸಬೇಕೆಂದು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ವಾರಾಹಿ ಜ್ಯೂವೆಲ್ಲರಿ ಶಾಪ್ ಮಾಲೀಕಿ ವನಿತಾ ಎಸ್. ಐತಾಳ್ ಎಂಬುವರಿಗೆ 9.82 ಕೋಟಿ ಮೌಲ್ಯದ 14.660 ಕೆ.ಜಿ ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಚಂದ್ರಾ ಲೇಔಟ್ ಪೊಲೀಸರು ಐಶ್ವರ್ಯಗೌಡ ಪತಿ ಕೆ.ಎನ್.ಹರೀಶ್ ಎಂಬುವರನ್ನ ಬಂಧಿಸಿದ್ದರು. ಬಂಧನ ಪ್ರಶ್ನಿಸಿ ಐಶ್ವರ್ಯ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಬಂಧನಕ್ಕೆ ಸಕಾರಣವನ್ನ ಲಿಖಿತವಾಗಿ ನೀಡದಿದ್ದಕ್ಕೆ ಆಕ್ಷೇಪಿಸಿ ಮಧ್ಯಂತರ ಜಾಮೀನು ನೀಡಿತ್ತು. ಕೂಡಲೇ ಆರೋಪಿತರನ್ನ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಬೆಳವಣಿಗೆ ಬೆನ್ನಲೇ ಆರ್.ಆರ್.ನಗರ ಪೊಲೀಸರು ದಂಪತಿ ಮನೆ ತಲಾಶ್ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ ಡಿ.ಕೆ.ಸುರೇಶ್ ಸಹೋದರಿ ಸೋಗಿನಲ್ಲಿ ಚಿನ್ನ ವ್ಯಾಪಾರ, ಚಿಟ್ ಫಂಡ್ಸ್ ಹಾಗೂ ರಿಯಲ್‌ ಎಸ್ಟೇಟ್​ನಲ್ಲಿ ತೊಡಗಿಸಿಕೊಂಡಿದ್ದೇನೆ, ತಮ್ಮ ವ್ಯವಹಾರದಲ್ಲಿ ಹಣ ಹೂಡಿದರೆ ಹೆಚ್ಚು ಹಣ ಸಂಪಾದಿಸಬಹುದು. ಅಲ್ಲದೆ, ತಮ್ಮ ಬಳಿ ಚಿನ್ನ ಖರೀದಿಸಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುವುದಾಗಿ ಐಶ್ವರ್ಯ ಗೌಡ ಆಮಿಷವೊಡ್ಡಿದ್ದಳು. ಇದನ್ನು ನಂಬಿ 2022ರಿಂದ 2024ರವರೆಗೆ ಹಂತ ಹಂತವಾಗಿ 3.25 ಕೋಟಿಯನ್ನು ಪತಿ ಹರೀಶ್ ಸೇರಿ ಇತರರ ಬ್ಯಾಂಕ್ ಖಾತೆಗಳಿಗೆ ಐಶ್ವರ್ಯ ಗೌಡ ವರ್ಗಾಯಿಸಿಕೊಂಡಿದ್ದಳು ಎಂದು ಶಿಲ್ಪಾ ಗೌಡ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.

2023ರ ಜೂನ್​ನಲ್ಲಿ ವ್ಯವಹಾರಕ್ಕೆ ತುರ್ತು ಹಣ ಬೇಕು ಎಂದು 430 ಗ್ರಾಂ ಚಿನ್ನ ಪಡೆದುಕೊಂಡಿದ್ದಳು. ಕೆಲ ದಿನ ಬಳಿಕ ಅನುಮಾನ ಬಂದು ತಾನು ನೀಡಿದ ಹಣ ಹಾಗೂ ಆಭರಣ ವಾಪಸ್ ನೀಡುವಂತೆ ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಳು. ತನಗೆ ರಾಜಕಾರಣಿಗಳ ಬೆಂಬಲವಿದ್ದು ನಿನಗೆ ಒಂದು ಗತಿ ಕಾಣಿಸುತ್ತೇನೆ. ನಿನ್ನ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ‌ ಸುದ್ದಿ ಹಬ್ಬಿಸಿ ಮರ್ಯಾದೆ ಕಳೆಯುವಂತೆ ಮಾಡುತ್ತೇನೆ ಎಂದು ಐಶ್ವರ್ಯ ಬೆದರಿಕೆ ಹಾಕಿದ್ದಳು ಎಂದು ಶಿಲ್ಪಾ ದೂರಿನಲ್ಲಿ ವಿವರಿಸಿದ್ದರು.

Edited By : Nagaraj Tulugeri
PublicNext

PublicNext

01/01/2025 10:04 pm

Cinque Terre

48.28 K

Cinque Terre

0