ಆನೇಕಲ್: ಭೂ ನುಂಗಣ್ಣರ ಹಾವಳಿ ಈಗೀಗ ಹೆಚ್ಚಾಗುತ್ತಿದೆ. ಅದರಲ್ಲೂ ಆ ಜಾಗ ಕೋಟ್ಯಂತರ ರೂ. ಬೆಲೆ ಬಾಳುತ್ತೆ ಅಂತ ಗೊತ್ತಾದ್ರೆ ಸಾಕು, ರಾತ್ರೋರಾತ್ರಿ ನಕಲಿ ದಾಖಲೆ ಸೃಷ್ಟಿ ಮಾಡಿ ನಂದೇ ಜಾಗ ಅಂತ ಕಾಂಪೌಂಡ್ ಹಾಕಿ, ಬಳಿಕ ಸೇಲ್ ಮಾಡಿ ಬಿಡ್ತಾರೆ!
ಜಾಗದ ಬೆಲೆ ಗಗನಕ್ಕೆ ಏರುತ್ತಿದ್ದಂತೆಯೇ ಅಡಿ ಅಡಿ ಜಾಗಕ್ಕೂ ಚಿನ್ನದ ಬೆಲೆ. ಹೀಗಾಗಿ ಹಲವರು ಅಕ್ಕಪಕ್ಕದ ಜಮೀನುಗಳನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಇದೇ ರೀತಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗಾಪುರ ಸರ್ವೆ ನಂಬರ್ 32/4ರಲ್ಲಿ 6 ಗುಂಟೆ ವೀರಭದ್ರಯ್ಯ ಬಿನ್ ಕೊತ್ತರಪ್ಪ ಎಂಬವರಿಗೆ ಸೇರಿದ ಜಾಗವನ್ನು ಪಕ್ಕದ ಜೆಆರ್ ಅರ್ಬೇನಿಯ ಡೆವಲಪ್ ಮೆಂಟ್ ಕಬಳಿಸಲು ಹುನ್ನಾರ ಮಾಡ್ತಿದೆ ಅಂತ ಆರೋಪ ಕೇಳಿಬಂದಿದೆ.
ಹಲವು ದಶಕಗಳಿಂದ ಜಾಗ ರೈತನ ಸ್ವಾಧೀನದಲ್ಲಿ ಇದ್ದರೂ ಕೂಡ ಏಕಾಏಕಿ ಜೆಆರ್ ಡೆವಲಪ್ ಮೆಂಟ್ "ಇದು ನಮಗೆ ಸೇರಿದ ಜಮೀನು" ಅಂತ ಜೆಸಿಬಿ ತರಿಸಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಇನ್ನು ಈ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಜೆಆರ್ ಡೆವಲಪ್ ಮೆಂಟ್ ವಿರುದ್ಧ ದೂರು ಕೊಟ್ಟರೂ ನ್ಯಾಯ ಕೊಡಿಸಬೇಕಾದ ಪೊಲೀಸರು, ರೈತರ ವಿರುದ್ಧವೇ ನಟೋರಿಯಸ್ ಗ್ಯಾಂಗ್ ಅಂತ ಬಿಂಬಿಸಿ ರೈತರ ಮೇಲೆಯೇ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಜಮೀನಿನ ಮಾಲೀಕರು ಪೊಲೀಸರ ವಿರುದ್ಧ ಹೆಬ್ಬಗೋಡಿ ಉಪವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
-ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
21/09/2022 08:25 am