ನೆಲಮಂಗಲ: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ದಾಸನಪುರದ ಹುಸ್ಕೂರು ರಸ್ತೆಯಲ್ಲಿರೋ ಟಾಟಾ ಅವೆನ್ಯೂ ಅಪಾರ್ಟ್ಮೆಂಟ್ ನಲ್ಲಿ ನೆಡೆದಿದೆ.
ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕನ್ನಡದಲ್ಲಿ 5 ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಗುರುಪ್ರಸಾದ್, ರಿಯಾಲಿಟಿ ಶೋ ಕಾರ್ಯಕ್ರಮದಲ್ಲೂ ಭಾಗವಹಿಸಿತ್ತಿದ್ದರು.
ಇಂದು ಬೆಳಗ್ಗೆಯಿಂದ ಸ್ಥಳೀಯ ಅಪಾರ್ಟ್ಮೆಂಟ್ ನಿವಾಸಿಗಳಿಗೆ ವಾಸನೆ ಬರ ತೊಡಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬಾಗಿಲನ್ನು ತೆರೆಯಲಾಗಿದ್ದು, ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.
ಕಳೆದ 3-4 ದಿನಗಳ ಹಿಂದೆಯೇ ಸೂಸೈಡ್ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸ್ ತನಿಖೆಯ ನಂತರ ಗುರುಪ್ರಸಾದ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಬೇಕಿದೆ.
1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್‌ರ 100ನೇ ಚಿತ್ರ. 2009ರಲ್ಲಿ ಇದೇ ಜೋಡಿ ‘ಎದ್ದೇಳು ಮಂಜುನಾಥ’ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ ‘ಡೈರೆಕ್ಟರ್ ಸ್ಪೇಷಲ್’,’ ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿ ‘ಮಠ’, ‘ಎದ್ದೇಳು ಮಂಜುನಾಥ’,’ಮೈಲಾರಿ’, ‘ಹುಡುಗರು’,’ಅನಂತು v/s ನುಸ್ರತ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನೂ ನವೆಂಬರ್ 2ರಂದು ಗುರುಪ್ರಸಾದ್ ಹುಟ್ಟುಹಬ್ಬ.ಇದರ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್ ಕೊಟ್ಟಿದೆ.
PublicNext
03/11/2024 03:17 pm