ಬೆಂಗಳೂರು: ಡಸ್ಟ್ ತುಂಬಿದ್ದ ಟೆಂಪೋ ಚಾಲಕನ ಅಚಾತುರ್ಯಕ್ಕೆ ಈಟಿಯೋಸ್ ಕಾರು ಜಖಂ ಆಗಿ ಡ್ರೈವರ್ ಮೂರ್ತಿ ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನೋವಾ ಕ್ರಿಸ್ಟಾ ಚಾಲಕ ಪುರುಷೋತ್ತಮ್ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. ಆಲ್ಟೋ ಕಾರಿನಲ್ಲಿದ್ದ ಆಂಧ್ರ ಪ್ರದೇಶದ ಅನಂತಪುರಂನ ಶ್ರೀಕಾಂತ್ ಮತ್ತು ಸಾವಿತ್ರಿ ಎಂಬ ವೃದ್ಧ ದಂಪತಿ ಬಚಾವಾಗಿದ್ದಾರೆ. ಈ ದುರಂತ ಘಟನೆ ಇಂದು ಮಧ್ಯಾಹ್ನ 12:30ಕ್ಕೆ ಏರ್‌ಪೋರ್ಟ್‌ನ ರಸ್ತೆ ಹುಣಸಮಾರನಹಳ್ಳಿ ಮೇಲ್ಸೇತುವೆ ಮೇಲೆ ಸಂಭವಿಸಿದೆ.
ಕಲ್ಲಿನಪುಡಿ ತುಂಬಿದ್ದ ಟೆಂಪೋ ಯಲಹಂಕ ಕಡೆಯಿಂದ ದೇವನಹಳ್ಳಿ ಕಡೆಗೆ ಚಲಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟೆಂಪೊ ರಸ್ತೆ ವಿಭಜಕ ದಾಟಿ ಮತ್ತೊಂದು ರಸ್ತೆಗೆ ನುಗ್ಗಿದೆ. ಪರಿಣಾಮ ಆಲ್ಟೋ ಕಾರಿಗೆ ಡಿಕ್ಕಿಯಾಗಿ, ಈಟಿಯೋಸ್ ಜಿ.ಡಿ ಮತ್ತು ಇನ್ನೋವಾ ಕ್ರಿಸ್ಟಾ ಸೇರಿ 3 ಕಾರು ಜಖಂ ಆಗಿವೆ.
ಈಟಿಯೋಸ್ ಚಾಲಕ ಮೂರ್ತಿ ಕೈ ಮತ್ತು ಕಾಲು ಮುರಿದು, ಗಂಭೀರ ಗಾಯಗೊಂಡು ಆಸ್ಪತ್ರೆಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಲ್ಟೋ ಕಾರು ಪಲ್ಟಿಯಾಗಿ, ಕಾರಿನೊಳಗಿದ್ದ ಆಂಧ್ರ ಪ್ರದೇಶದ ಅನಂತಪುರದ ವೃದ್ಧ ದಂಪತಿ ಬಚಾವಾಗಿದ್ದಾರೆ.
ಇನ್ನು ಅಪಘಾತಕ್ಕೆ ಕಾರಣವಾದ ಟೆಂಪೋ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚಿಕ್ಕಜಾಲ ಸಂಚಾರಿ ಪೊಲೀಸರು ಆಗಮಿಸಿ ಸುಗಮ ಸಂಚಾರದ ವ್ಯವಸ್ಥೆ ಮಾಡಿದರು. ಇನ್ನು ಅಪಘಾತಕ್ಕೆ ಕಾರಣವಾದ ಟೆಂಪೋ, ಎಸ್ಕೇಪ್ ಆಗಿರುವ ಚಾಲಕ ಮತ್ತು ಮಾಲೀಕರ ತನಿಖೆಗೆ ಚಿಕ್ಕಜಾಲ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
PublicNext
06/06/2022 07:07 pm