ಬಾಗಲಕೋಟೆ: ವಿಶ್ವ ವಿಖ್ಯಾತ ಮೈಸೂರು ದಸರಾ ವೇಳೆ ನಡೆಯುವ ಅದ್ಧೂರಿ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಅಪ್ಪಟ ದೇಶಿ ತಳಿ ಖ್ಯಾತಿಯ ಮುಧೋಳ ಶ್ವಾನ, ಅಂತಾರಾಷ್ಟ್ರೀಯ ಖ್ಯಾತಿಯ ಇಳಕಲ್ ಸೀರೆ ಮತ್ತು ಇತಿಹಾಸ ಪ್ರಸಿದ್ಧ ಪ್ರವಾಸಿತಾಣ ಐಹೊಳೆಯಲ್ಲಿನ ಪಾರ್ಲೊಮೆಂಟ್ ಮಾದರಿ ದುರ್ಗಾ ದೇವಾಲಯ ರೂಪಕಗಳು ವಿಜೃಂಭಿಸಲಿವೆ.
ಜಿಲ್ಲೆಯ ಮುಧೋಳ ಹೌಂಡ ತಳಿಯ ನಾಯಿಗಳು ಇನ್ನಿತರ ನಾಯಿಗಳಿಗಿಂತ ಜಾಣ , ಅತ್ಯಂತ ಚುರುಕಾಗಿರುವ ಹಾಗೂ ಅತ್ಯಂತ ವಿಶ್ವಾಸಾರ್ಹ ಪ್ರಾಣಿಗಳಲ್ಲಿ ಮುಂಚೂಣಿಯಲ್ಲಿವೆ. ಮುಧೋಳ ಹೌಂಡ್ಯಗಳನ್ನು ಪಾಶಾಮಿ ಹೌಂಡ , ಕಾಠವಾರ ಹೌಂಡ ಮತ್ತು ಕಾರವಾನ ಹೌಂಡ ಎಂದು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಅಪ್ಪಟ ದೇಶಿ ತಳಿಯ ಈ ಮುಧೋಳ ನಾಯಿಯು ಅಧೀಕೃತವಾಗಿ ಡಿಸೆಂಬರ್ -2022 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದೆ . ಈ ಮೂಲಕ ಭಾರತೀಯ ಸೇನೆಗೆ ಸೇರಿದ ಮೊದಲ ದೇಶಿ ನಾಯಿಗಳು ಎಂಬ ಕೀರ್ತಿಗೆ ಪಾತ್ರವಾಗಿವೆ .
ಸಾಂಪ್ರದಾಯಿಕ ಇಳಕಲ್ಲ ಸೀರೆ: ಜಿಲ್ಲೆಯ ಇಳಕಲ್ಲ ಸೀರೆಗಳಿಗೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. 8ನೇ ಶತಮಾನದಲ್ಲಿ ಇಳಕಲ್ಲ ನಗರದ ಹತ್ತಿ ಮತ್ತು ರೇಷ್ಮೆ ಬಣ್ಣ ಮಾಡುವುದಕ್ಕೆ ಹಾಗೂ ನೇಕಾರಿಕೆಗೆ ಪ್ರಸಿದ್ದಿ ಪಡೆದ ಸ್ಥಳವಾಗಿತ್ತು , ಸೃಜನಶೀಲ ನೇಕಾರರು ಇಳಕಲ್ಲ ಸೀರೆಗಳನ್ನು ಆವಿಷ್ಕರಿಸಿದರೆಂದು ಪ್ರತೀತಿ ಇರುತ್ತದೆ .
ಐಹೊಳೆ ದುರ್ಗಾ ದೇವಾಲಯ : ಐಹೊಳ ಗ್ರಾಮವು ಜಿಲ್ಲೆಯ ಹುನಗುಂದ ತಾಲೂಕಿಗೆ ಸೇರಿದ ಗ್ರಾಮವಾಗಿದೆ . ಐಹೊಳೆ ಗ್ರಾಮವು ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ದೊಡ್ಡ ಕೇಂದ್ರವಾಗಿರುವುದ ರಿಂದ ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎಂದು ಕರೆಯಲಾಗುತ್ತದೆ . ಐಹೊಳ ಗ್ರಾಮದ ದೇವಾಲಯಗಳಲ್ಲಿ ದುರ್ಗಾ ದೇವಾಲಯವು ಅತ್ಯಂತ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವು ಅಸಂಖ್ಯಾತ ಕಲ್ಲಿನ ಕಂಬಗಳು ಹಾಗೂ ಇಂಗ್ಲೀಷ್ ಅಕ್ಷರ ಯು ಆಕಾರದ ವಿಶಿಷ್ಟ ರಚನೆಯಿಂದ ಕೂಡಿರುತ್ತದೆ . ಹೀಗಾಗಿ ದೆಹಲಿ ಸಂಸತ್ ಭವನವನ್ನು ನೆನಪಿಸುತ್ತಿದೆ .
ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಜಿಲ್ಲೆಯ ಹೆಮ್ಮೆಯಂತಿರುವ ಮುಧೋಳ ಶ್ವಾನ, ಇಳಕಲ್ ಸೀರೆ ಮತ್ತು ಐಹೊಳೆ ದುರ್ಗಾದೇವಿ ದೇವಾಲಯದ ರೂಪಕಗಳ ಪ್ರದರ್ಶನ ನಡೆಯುತ್ತಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.
PublicNext
04/10/2022 05:15 pm