ರಬಕವಿ-ಬನಹಟ್ಟಿ: ರಾಜ್ಯದಲ್ಲಿ ಆರು ಲಕ್ಷ ಇಪ್ಪತ್ತು ಸಾವಿರ ಎಕರೆಯಷ್ಟು ಭೂಮಿಯನ್ನು ವಕ್ಫ್ ಕಬಳಿಸಲಿದೆ ಎಂಬ ಮಾಹಿತಿಯನ್ನು ವಕೀಲರು ಹೇಳಿದ್ದು, ದೇಶದಲ್ಲಿ 38 ಲಕ್ಷ ಎಕರೆಯಷ್ಟು ಭೂಮಿ ಕಬಳಿಸಲಾಗುತ್ತಿದೆ. ಅಂದರೆ ನಾಲ್ಕು ಪಾಕಿಸ್ತಾನದಷ್ಟು ಭೂಪ್ರದೇಶಕ್ಕೆ ಸಮನಾಗಿದ್ದು, ಕಾರಣ ಸನಾತನ ಹಿಂದೂ ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ತೇರದಾಳ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಶನಿವಾರ ಸಂಜೆ ಆಯೋಜಿಸಿದ ವಕ್ಫ್ ಬೋರ್ಡ್ ಹಠಾವೋ, ದೇಶ್ ಬಚಾವೋ ಕಾರ್ಯಕ್ರಮದಲ್ಲಿ ಭಾರತಾಂಬೆಗೆ ಪುಷ್ಪನಮನ ಸಲ್ಲಿಸಿ, ಜ್ಯೋತಿ ಬೆಳಗಿಸಿ ಮಾತನಾಡಿದರು. ವಕ್ಫ್ ಕಾನೂನು ಪೂರ್ಣ ರದ್ದು ಮಾಡುವುದು ನಮ್ಮ ಹೋರಾಟವಾಗಿದೆ. ಸನಾತನ ಧರ್ಮ ಉಳಿಯುವವರೆಗೆ ಅಂಬೇಡ್ಕರ್ ಸಂವಿಧಾನ ಉಳಿತೈತಿ ಎಂದರು. ವಕ್ಫ್ ಹೋರಾಟ ಸಿಎಂ ಪಟ್ಟ ಹಾಗೂ ಲೀಡರ್ ಶಿಪ್ ಗಾಗಿ ಅಲ್ಲ. ದೇಶದ ಸನಾತನ ವ್ಯವಸ್ಥೆ ಉಳಿಯುವುದಕ್ಕಾಗಿ ಎಂದು ಸ್ಪಷ್ಟಪಡಿಸಿದರು.
ಮೈಗೂರನ ಗುರುಪ್ರಸಾದ ಶ್ರೀ ಪ್ರಭಾವಿ ಭಾಷಣ ಮಾಡುತ್ತಾ, ಯುವಪೀಳಿಗೆಗೆ ಉತಾರದಲ್ಲಿ ಜಾಗೃತರಾಗದಿದ್ದರೇ ನೀವು ತೊಟ್ಟ ಬಟ್ಟೆ ಮೇಲೂ ವಕ್ಫ್ ಬರುತ್ತೆ. ಈಗ ಅನ್ನದಾತನ ಬುಡಕ್ಕೆ ಬೆಂಕಿ ಬಿದ್ದಿದೆ. ಪ್ರತಿ ಮನೆಮನೆಗೆ ಜಾಗೃತರಾಗಿ, ಹಿಂದೂಗಳನ್ನು ಸೆಡ್ಡು ಹೊಡೆದು ಎಚ್ಚರಿಸುವ ಕಾರ್ಯವಾದರೇ ನಮ್ಮ ಮನೆಯ ಹೆಣ್ಣುಮಗಳು ಸುರಕ್ಷಿತವಾಗಿರುತ್ತಾಳೆ. ನನಗೊಂದು ಅವಕಾಶ ಕೊಟ್ಟು ನೋಡಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರಂತೆ ಆಡಳಿತ ಮಾಡಿ ತೋರಿಸುತ್ತೇನೆ ಎಂದು ಘಂಟಾಘೋಷವಾಗಿ ಯೋಗಿ ಒಬ್ಬರು ವೇದಿಕೆಯಲ್ಲಿ ರಾಜ್ಯದ ಚುಕ್ಕಾಣಿಯ ಕುರಿತಂತೆ ಕರೆ ನೀಡಿದರು.
ಮಾಜಿ ಸಂಸದ ಪ್ರತಾಪಸಿಂಹ, 2023ರ ಚುನಾವಣಾ ಪ್ರಚಾರದಲ್ಲಿ ಹೇಳಿದಂತೆ ಈಗ ತಾಲಿಬಾನಿ ಸರ್ಕಾರ ನಡೆಯುತ್ತಿದೆ. ಸಿದ್ರಾಮಯ್ಯ ಸರ್ಕಾರವು ರೈತರ ಅನ್ನಕ್ಕೆ ಕೈ ಹಾಕಿದೆ. ರಾತ್ರೋರಾತ್ರಿ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ತಿಗಳು ವಕ್ಫ್ ಆಸ್ತಿಗಳಾದವು. ಕಾರಣ ನೋಟೀಸ್ ರದ್ದತಿ ಮಾತ್ರ ಅಲ್ಲ. ವಕ್ಫ್ ನ ಗೆಜೆಟ್ ನೋಟಿಫಿಕೇಷನ್ ರದ್ದಾಗಬೇಕು ಎಂಬುದು ನಮ್ಮ ಹೋರಾಟ ಎಂದರು. ಹಳಿಂಗಳಿ ಕಮರಿಮಠದ ಶರಣ ಬಸವ ದೇವರು, ಶಾಸಕ ಸಿದ್ದು ಸವದಿ ಮಾತನಾಡಿದರು.
ಹಿರಿಯ ನಾಯಕ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ರಮೇಶ ಜಾರಕಿಹೊಳಿ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್, ಉಮೇಶ ಮಹಾಬಲ ಶೆಟ್ಟಿ, ರೈತ ಮುಖಂಡ ವಿರೂಪಾಕ್ಷ ಹಿರೇಮಠ, ಸುಖರಾಯಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.
PublicNext
01/12/2024 11:27 am