ರಬಕವಿ-ಬನಹಟ್ಟಿ: ನೇಕಾರರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬನಹಟ್ಟಿಯ ಕೆಚ್‍ಡಿಸಿ ಕಚೇರಿ ಮುಂಭಾಗ ಆರಂಭಗೊಂಡ ಧರಣಿ ಮುಷ್ಕರವು ಗುರುವಾರ 2ನೇ ದಿನಕ್ಕೆ ಕಾಲಿಟ್ಟಿದೆ.
ನೇಕಾರರು ಬೆಳಿಗ್ಗೆಯಿಂದಲೇ ಧರಣಿಯಲ್ಲಿ ಭಾಗವಹಿಸಿ, ಅಲ್ಲಿಯೇ ಅಡುಗೆ ಮಾಡಿ, ಊಟ ಮಾಡುವುದರ ಮೂಲಕ ಹೋರಾಟದ ಗಟ್ಟಿತನವನ್ನು ಪ್ರದರ್ಶಿಸಿದರು. ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿ, ನವೆಂಬರ್ 23ರಂದು ಜಿಲ್ಲಾ ಉಸ್ತುವಾರಿ ಸಚಿವರು ಬನಹಟ್ಟಿಗೆ ಭೇಟಿ ನೀಡುತ್ತಿದ್ದು, ವೇದಿಕೆಗೆ ಭೇಟಿಯಾಗಬೇಕೆಂದು ಆಗ್ರಹಿಸಿ, ಅವರಿಗೆ ಮದ್ಯದ ಬಗ್ಗೆ ಮಾತ್ರ ಚಿಂತೆ ಇದೆ ಹೊರತು ಜಿಲ್ಲೆಯ ನೇಕಾರರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಅಸಮಾಧಾನ ಹೊರಹಾಕಿದರು. ವೇದಿಕೆಗೆ ಭೇಟಿ ನೀಡದಿದ್ದರೆ ಬರುವ ದಿನಗಳಲ್ಲಿ ಅವರ ವಿರುದ್ದವೇ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಆನಂದ ಕೊಪರ್ಡೆ, ರಾಜೇಶ್ವರಿ ಬಾಣಕಾರ, ರತ್ನವ್ವ ಮಿರಜಕರ, ಶಂಕ್ರವ್ವ ಹುಚ್ಚಾಳ, ಶಾರದಾ ಅಥಣಿ, ಮಾನಂದಾ ಗಂಜಾಳ ಸೇರಿದಂತೆ ಅನೇಕರಿದ್ದರು.
ಬಾರದ ಆರೋಗ್ಯ ಅಧಿಕಾರಿ - ಧರಣಿ ಮುಷ್ಕರ 2 ದಿನ ಕಳೆದರು ಕೂಡ ಆರೋಗ್ಯ ಸಿಬ್ಬಂದಿ ಬಾರದೇ ನಿರ್ಲಕ್ಷ್ಯ ತೋರಿದ್ದಾರೆ. ಧರಣಿ ನಿರತ ನೇಕಾರರ ಅನಾರೋಗ್ಯಕ್ಕೆ ತೊಂದರೆಯಾದರೆ ಏನು ಗತಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
PublicNext
21/11/2024 10:08 pm