ಬೆಂಗಳೂರು : ಬಾಂಗ್ಲಾದೇಶ ಮೂಲದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಆರೋಪಿಯನ್ನ ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ ಮುದುಕಪ್ಪ (28) ಎಂಬಾತನನ್ನ ಫೆಬ್ರವರಿ 2ರಂದು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಜನವರಿ 24ರಂದು ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯ ಕಲ್ಕೆರೆ ಲೇಕ್ ಬಳಿಯಿರುವ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿ ಬಳಿಕ ಕತ್ತು ಹಿಸುಕಿ, ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಸ್ಥಿತಿಯಲ್ಲಿ ನಜ್ಮಾ (28) ಎಂಬಾಕೆಯ ಶವ ಪತ್ತೆಯಾಗಿತ್ತು.
ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಮುದುಕಪ್ಪ, ನಜ್ಮಾ ವಾಸವಿದ್ದ ಶೆಡ್ ಹಾಗೂ ಆಕೆ ಕೆಲಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ಗೆ ನೀರು ಪೂರೈಸಲು ಹೋದಾಗ ಆಕೆಯೊಂದಿಗೆ ಮಾತನಾಡುತ್ತಿದ್ದ. ಜನವರಿ 23ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ನಜ್ಮಾಳ ಹಿಂದೆ ಹೋಗಿದ್ದ ಮುದುಕಪ್ಪ, ಆಕೆಯನ್ನ ಕಲ್ಕೆರೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಆಕೆ ಪ್ರತಿರೋಧವೊಡ್ಡಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಉಸಿರುಗಟ್ಟಿಸಿ ಹತ್ಯೆಗೈದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ.
ಇನ್ನೂ ಕೊಲೆಯಾದ ಮಹಿಳೆಗೆ ಮುದುಕಪ್ಪ ಹಿಂದೆ ಪರಿಚಯವಿದ್ದು, ಕಳೆದ ಕೆಲವು ತಿಂಗಳ ಹಿಂದೆ ಪೊಲೀಸ್ರು ಬಾಂಗ್ಲ ಪ್ರಜೆಗಳ ಗುಡಿಸಲುಗಳ ಮೇಲೆ ದಾಳಿ ಮಾಡಿ ಓಡಿಸಿದ್ರು. ಈ ವೇಳೆ ನಜ್ಮಾ ಮುದುಕಪ್ಪ ಸಂಪರ್ಕ ಕಟ್ ಆಗಿದೆ. ಇದಾದ ನಂತರ ಕಲ್ಕೆರೆ ಅಪಾರ್ಟ್ಮೆಂಟ್ ಗೆ ನೀರು ಬಿಡಲು ಹೋದಾಗ ನಜ್ಮಾಳನ್ನ ನೋಡಿದ್ದಾನೆ. ಆದ್ರೆ ನಜ್ಮಾ ಮುದುಕಪ್ಪ ಜೊತೆ ಮಾತನಾಡಲು ನಿರಾಕರಿಸಿದ್ದಾಳೆ. ಇದಕ್ಕೆ ಕುಪಿತಗೊಂಡ ಮುದುಕಪ್ಪ ನಜ್ಮಾ ಮನೆಗೆ ಹೋಗುವಾಗ ಹಿಂದೆ ಹೋಗಿದ್ದಾನೆ. ಕಲ್ಕೆರೆ ಕೆರೆ ಬಳಿ ನಜ್ಮಾ ಬರ್ತಿದ್ದಂತೆ ಆಕೆಯನ್ನ ಬಲವಂತವಾಗಿ ಎಳೆದೊಯ್ದು ಅತ್ಯಾಚಾರ ವೆಸಗಿದ್ದಾನೆ. ನಜ್ಮಾ ಕಿರುಚಾಡಲು ಯತ್ನಿಸಿದಾಗ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿ ತಲೆ ಮೇಲೆ ಕಲ್ಲುಹಾಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿ ನಗರ ಠಾಣೆ ಪೊಲೀಸರು ಘಟನೆಯ ದಿನ ಕೆರೆಯ ಬಳಿ ಓಡಾಡಿದ್ದ ಐದಾರು ಜನರನ್ನ ವಿಚಾರಣೆಗೊಳಪಡಿಸಿದ್ದರು. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್ಎಸ್ಎಲ್ ವರದಿಯನ್ನ ಆಧರಿಸಿ ಆರೋಪಿ ಮುದುಕಪ್ಪನನ್ನ ಬಂಧಿಸಿದ್ದಾರೆ.
ಇನ್ನೂ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆ ಹಾಗೂ ಗಡಿಪಾರಿನ ಕುರಿತು ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಾಂಗ್ಲಾದೇಶ ಮೂಲದವರು ಮಾತ್ರವಲ್ಲದೇ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಆಫ್ರಿಕಾ ಮೂಲದವರು ಸೇರಿದಂತೆ ಇತರರನ್ನ ಪತ್ತೆ ಹಚ್ಚಿ ಗಡಿಪಾರು ಮಾಡುವ ಕೆಲಸಗಳಾಗುತ್ತಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
PublicNext
04/02/2025 04:59 pm