ವಿಜಯಪುರ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇತೃತ್ವದ ಕ್ರಾಂತಿವೀರ ಬ್ರಿಗೇಡ್ ಗೆ ದಿನಗಣನೆ ಆರಂಭವಾಗಿದೆ. ಈ ಕುರಿತು ವಿವರ ಇಲ್ಲಿದೆ ನೋಡಿ...
ಕ್ರಾಂತಿ ಪುರುಷ ವಿಶ್ವಗುರು ಬಸವೇಶ್ವರರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಫೆ.4ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಗುರುಕೃಪಾ ಶಾಲೆ ಪಕ್ಕದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ಅಲ್ಲದೇ ಬಸವನಬಾಗೇವಾಡಿ ಪಟ್ಟಣ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ.
ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಕಡೆಗಳಲ್ಲಿ ಕೇಸರಿ ಬಟ್ಟೆಯಿಂದ ಸ್ವಾಗತ ಕಮಾನುಗಳನ್ನ ಹಾಕಲಾಗಿದ್ದು, ವಿವಿಧ ಮುಖಂಡರಿಗೆ ಸ್ವಾಗತ ಕೋರುವ ಬ್ಯಾನರ್ ಗಳು ರಾರಾಜಿಸುತ್ತಿವೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ 1008 ಮಠಾಧೀಶರ ಪಾದಪೂಜೆಯೊಂದಿಗೆ ಕ್ರಾಂತಿವೀರ ಬ್ರಿಗೇಡ್ ಲೋಕಾರ್ಪಣೆಗೊಳ್ಳಲಿದ್ದು, ಹಿಂದೂ ಧರ್ಮ ಜಾಗೃತಿಗಾಗಿ ಬ್ರಿಗೇಡ್ ತಲೆ ಎತ್ತುತ್ತಿದೆ ಎನ್ನುವುದು ಕ್ರಾಂತಿವೀರ ಬ್ರಿಗೇಡ್‌ನ ಘೋಷವಾಕ್ಯವಾಗಿದೆ.
ಒಟ್ಟಾರೆಯಾಗಿ ಕ್ರಾಂತಿಪುರುಷರ ನೆಲದಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ.
PublicNext
02/02/2025 08:25 pm