ಶಿವಮೊಗ್ಗ : ಸರ್ಕಾರ ಮಾಡುವ ಆದೇಶ ಅಥವಾ ಸಭೆ ಸಮಾರಂಭಗಳಲ್ಲಿ ನೀಡುವ ಹೇಳಿಕೆಗಳು ಕೆಲವೊಮ್ಮೆ ಸಾಕಷ್ಟು ದ್ವಂದ್ವಗಳಿಂದ ಕೂಡಿರುತ್ತೆ. ಅದಕ್ಕೆ ಉದಾಹರಣೆ ಈ ಸ್ಟೋರಿ. ಸರ್ಕಾರವೇ ಹೇಳಿದ ಮಾತಿಗೆ ವಿರುದ್ಧವಾಗಿ ಅರಣ್ಯ ಇಲಾಖೆ ನಡೆದುಕೊಳ್ಳುತ್ತಿದ್ದು, ಸಾಗುವಳಿ ಮಾಡಿಕೊಂಡು ಬಂದ ರೈತರಿಗೆ ಭೂಮಿ ತೆರವು ಮಾಡುವಂತೆ ನೋಟಿಸ್ ನೀಡಿದೆ.
ಹೀಗೆ ಸಾಗುವಳಿ ಚೀಟಿ ಹಿಡಿದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಿಗೆನಹಳ್ಳಿ ರೈತರು. ಕಳೆದ 60-70 ವರ್ಷಗಳಿಂದಲೂ ಹೊಳೆಹೊನ್ನೂರು ಹೋಬಳಿಯ ಮಲ್ಲಿಗೆನಹಳ್ಳಿ ಸರ್ವೆ ನಂಬರ್ 31ರ ನೂರಾರು ಎಕರೆ ಜಾಗದಲ್ಲಿ ಸಾಗುವಳಿ ಚೀಟಿ ತಗೊಂಡು ಕೃಷಿ ಮಾಡುತ್ತಾ ಬಂದಿದ್ದಾರೆ.
ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಬಂದು ಇಪ್ಪತ್ತಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಿ ಸಾಗುವಳಿ ಮಾಡಿಕೊಂಡು ಬಂದ ಜಾಗವನ್ನು ತೆರವುಗೊಳಿಸುವಂತೆ ಸೂಚನೆ ನೀಡಿ ಹೋಗಿದ್ದಾರೆ. ಇದರಿಂದಾಗಿ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡು ಬಂದ ರೈತರು ದಿಕ್ಕು ಕಾಣದೆ ಕಂಗಾಲಾಗಿದ್ದು, ಸರ್ಕಾರ ಅರಣ್ಯ ಇಲಾಖೆಗೆ ಸೂಚನೆ ನೀಡುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ರಾಜ್ಯ ಸರ್ಕಾರ 2015ರ ಒಳಗೆ ಸಾಗುವಳಿ ಮಾಡಿದ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರೈತರ ಪರವಾಗಿ ನಮ್ಮ ಸರ್ಕಾರ ಎಂದಿಗೂ ಇದೆ ಎಂದಿದೆ. ಆದರೆ, ಸರ್ಕಾರವೇ ಹೇಳಿದ ಮಾತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದು, ನೀವು ನಮ್ಮ ಭೂಮಿ ಕಿತ್ತುಕೊಳ್ಳೋಕೆ ಬಂದ್ರೆ ಮುಂದೆ ಆಗುವ ಅನಾಹುತಗಳೇ ನೀವೇ ಹೊಣೆ, ನಾವು ಪ್ರಾಣ ಕೊಡಲೂ ಸಿದ್ಧರಿದ್ದೇವೆ ಎಂದು ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಸರ್ಕಾರವೇ ನೀಡಿದ ಭರವಸೆಯನ್ನು ಸರ್ಕಾರವೇ ಉಲ್ಲಂಘಿಸುತ್ತಿದೆ! ಕೂಡಲೇ ಅರಣ್ಯ ಇಲಾಖೆಯಿಂದ ನೋಟಿಸ್ ಪಡೆದ ರೈತರ ಪರವಾಗಿ ಸರ್ಕಾರ ನೆರವಿಗೆ ಧಾವಿಸಿ, ಅಷ್ಟೋ ಇಷ್ಟೋ ಬದುಕಿಗಾಗಿ ಮಾಡಿಕೊಂಡು ಬಂದ ಭೂಮಿಯನ್ನು ಉಳಿಸಿಕೊಡಬೇಕಿದೆ.
-ವೀರೇಶ್ ಜಿ.ಹೊಸೂರ್, ಪಬ್ಲಿಕ್ ನೆಕ್ಸ್ಟ್ ಶಿವಮೊಗ್ಗ
PublicNext
01/02/2025 09:42 pm