ಶಿವಮೊಗ್ಗ : ರೈತರ ಸಾಗುವಳಿ ಜಮೀನುಗಳಲ್ಲಿ ಯಾವುದೇ ಕಾರಣಕ್ಕೂ ಅರಣ್ಯ ಗಡಿ ಗುರುತು ಕಲ್ಲು ನೆಡಬಾರದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅರಣ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಲಕ್ಷ್ಮಿಪುರ ಸೇರಿದಂತೆ ಯಡೇಹಳ್ಳಿ ಭಾಗದಲ್ಲಿ ಅರಣ್ಯ ಗಡಿಕಲ್ಲು ನೆಡುವ ಕಾಮಗಾರಿ ವಿರೋಧಿಸಿ ರೈತರು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಮಾವಿನಕಟ್ಟೆ ಉಪ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಅರಣ್ಯಾಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.
ಲಕ್ಷ್ಮಿಪುರ, ಯಡೇಹಳ್ಳಿ, ಅಶೋಕನಗರ ಭಾಗದಲ್ಲಿ ಶರಾವತಿ ಮುಳುಗಡೆ ನಿರಾಶ್ರಿತರಿದ್ದಾರೆ. ಮುಳುಗಡೆ ಸಂತ್ರಸ್ತರಿಗೂ ನೋಟಿಸ್ ನೀಡಿದ್ದಾರೆ. ಅಲ್ಲದೆ, ಭೂಮಿ ಮಂಜೂರಾತಿ ಪ್ರಶ್ನಿಸಿ ಹೂಡಿದ ದಾವೆಗಳು ನ್ಯಾಯಾಲಯದಲ್ಲಿವೆ. ಆ ಭಾಗದ ರೈತಾಪಿ ಜನರು ಕಲ್ಲು ನೆಡುವುದು ಬೇಡವೆಂದರೂ ಅರಣ್ಯಾಧಿಕಾರಿಗಳು ರೈತರೊಂದಿಗೆ ಜಿದ್ದಿಗೆ ಬಿದ್ದವರಂತೆ ವರ್ತಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯದಲ್ಲಿ ಎಲ್ಲೂ ಇಲ್ಲದ ವಿಶೇಷ ಕಾನೂನು ನಮ್ಮ ಭಾಗದ ಅರಣ್ಯ ಅಧಿಕಾರಿಗಳಿಗೆ ನೀಡಿದಂತೆ ಕಾಣುತ್ತಿದೆ.
ಕಳೆದೆರಡು ತಿಂಗಳ ಹಿಂದೆ ಅರಣ್ಯ ಮಂತ್ರಿಗಳನ್ನು ಭೇಟಿ ಮಾಡಿದಾಗ ಜಿಲ್ಲೆಯಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸಾಗುವಳಿದಾರರ ಬೆನ್ನಿಗೆ ನಿಂತಿದ್ದರು. ಅರಣ್ಯಾಧಿಕಾರಿಗಳು ಅರಣ್ಯ ಮಂತ್ರಿಗಳ ಮಾತಿಗೂ ಬೆಲೆ ನೀಡದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಗ್ರಾಮೀಣ ಭಾಗದಲ್ಲಿ ರೈತರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ಸಂಘರ್ಷ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರೈತರ ಜಮೀನಿನಲ್ಲಿ ಕಲ್ಲು ನೆಡಲು ಮುಂದಾಗುವ ಅರಣ್ಯ ಸಿಬ್ಬಂದಿಯನ್ನು ತಡೆದು ವಾಪಸ್ ಕಳಿಸಿ ಯಾವುದೇ ಕಾರಣಕ್ಕೂ ಕಲ್ಲು ನೆಡಲು ಬಿಡಬಾರದು ಎಂದರು. ಈ ವೇಳೆ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ್ ಕೂಡ ಉಪಸ್ಥಿತರಿದ್ದರು.
Kshetra Samachara
01/02/2025 07:57 pm