ಮಂಡ್ಯ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭು ಎಂದು ಹೇಳಲಾಗುತ್ತೆ. ಆ ಪ್ರಭುವಿಗೆ ಕನಿಷ್ಟದಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳನ್ನ ನೀಡುವಲ್ಲಿ ಇಂದಿನ ಸರ್ಕಾರಗಳು ವಿಫಲವಾಗಿವೆ. ಇದು ಮೂಲ ಭೂತ ಸೌಕರ್ಯಗಳನ್ನೇ ಕಾಣದ ಸೋಲಿಗ ಬುಡ ಕಟ್ಟು ಕುಟುಂಬಗಳು ವಾಸಿಸುತ್ತಿರುವ ಚಾಮಿಕೊಪ್ಪಲು ಗ್ರಾಮದ ಕಥೆ.
ಕೆ.ಆರ್.ಪೇಟೆ ತಾಲ್ಲೂಕು ಹರಿಹರ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಚಾಮಿಕೊಪ್ಪಲು ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲಾ ತಮ್ಮ ತಾತ ಮುತ್ತಾತನ ಕಾಲದಿಂದ ಇಲ್ಲಿ ವಾಸಿಸುತ್ತಿದ್ದಾರೆ. ಆದ್ರೂ ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಕುಡಿಯುವ ನೀರಂತೂ ಎರಡು ಕಿಲೊಮೀಟರ್ ಹೋಗಿ ತರಬೇಕು. ಕುಡಿಯುವ ನೀರಿನ ಸಂಪರ್ಕಕ್ಕೆ ಕರೆಂಟ್ ಸರ್ವಿಸ್ ಕೊಟ್ಟಿಲ್ಲ. ನೀರಿನ ಟ್ಯಾಂಕ್ ಸುತ್ತಾ ಕಾಲಿಡಲು ಅಸಹ್ಯವಾಗುವಂತಿದೆ. ಇಲ್ಲಿನ ಪುಟ್ಟ ಪುಟ್ಟ ಮಕ್ಕಳು ಕಿಲೊಮೀಟರ್ ಗಟ್ಟಲೆ ಶಾಲೆಗಾಗಿ ನಡೆಯಬೇಕು. ಹೆಣ್ಣು ಮಕ್ಕಳು ಬೀದಿಯಲ್ಲಿ ಸ್ನಾನ ಮಾಡಬೇಕು. ಕೆ.ಆರ್. ಪೇಟೆಯಿಂದ ಕೆಲ ಕಿಲೋ ಮಿಟರ್ ಅಂತರದಲ್ಲಿರುವ ಈ ಚಾಮಿಕೊಪ್ಪಲು ಸ್ಥಿತಿ ಅಂಧ ಅಧಿಕಾರಿಗಳಿಗೆ ಕಂಡೇ ಇಲ್ಲ.
ಅಕ್ಷರಕ್ಕೂ ಅಲೆದಾಡುತ್ತಿರುವ ಬುಡಕಟ್ಟು ಕುಟುಂಬದ ಮಕ್ಕಳ ಶಾಪ ಇವರಿಗೆ ತಟ್ಟದೇ ಇರೋದಿಲ್ಲ. ಮೂಲತಃ ಮೈಸೂರು ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಿಂದ ತಮ್ಮ ಪೂರ್ವಜರ ಕಾಲದಲ್ಲೇ ಚಾಮಿಕೊಪ್ಪಲು ಗ್ರಾಮಕ್ಕೆ ಬಂದು ಬೀಡು ಬಿಟ್ಟ ಸುಮಾರು 50 ಕ್ಕೂ ಹೆಚ್ಚು ಸೋಲಿಗ ಸಮುದಾಯದ ಬುಡಕಟ್ಟು ಕುಟುಂಬಗಳು ಮತ ಚಲಾಯಿಸುತ್ತಿವೆ. 5-6 ಕುಟುಂಬಕ್ಕೆ ಮಾತ್ರ ಪಡಿತರ ಕಾರ್ಡ್ ಇದೆ. ಅಷ್ಟೇ ಅನ್ನೋದು ಬಿಟ್ರೆ ಬೇರೆ ಯಾವ ಸೌಲಭ್ಯವಿಲ್ಲ.
ಈ ಜನ ಹೊಟ್ಟೆಪಾಡಿಗೆ ಜಾತ್ರೆಗಳಲ್ಲಿ ಬಳೆ ಮಾರಿ,ಗಾರೆ ಕೆಲಸ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.ಒಂದೇ ಗುಡಿಸಲು,ಮನೆ,ತಗಡುಕಟ್ಟಿ ಕೊಂಡು ಪ್ರಾಣಿಗಳಂತೆ ಒಂದು ಮನೆಯಲ್ಲಿ ಎರಡೆರಡು ಕುಟುಂಬಗಳು ವಾಸ ಮಾಡುತ್ತಿದ್ದು ಯಾವ ಗ್ರ್ಯಾಂಟ್ ಇವರಿಗೆ ದಕ್ಕಿಲ್ಲ. ಸರ್ಕಾರವೇ ಸೋಲಿಗ ಬುಡಕಟ್ಟು ಜನಾಂಗ ಎಂದು ಪರಿಗಣಿಸಿ ಜಾತಿ ಪ್ರಮಾಣ ಪತ್ರ ನೀಡಿದ್ದರೂ ಇನ್ನೂ ಗ್ರಾ.ಪಂ ಮತ್ತು ತಾ.ಪಂ ಯಿಂದ ಸಿಗುವ ವಿದ್ಯುತ್, ಶೌಚಾಲಯ, ವಸತಿ, ರಸ್ತೆ, ಯಾವುದೂ ಸಿಕ್ಕಿಲ್ಲ. ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಂಗನವಾಡಿ, ಶಾಲೆ ನಿರ್ಮಾಣಗೊಂಡಿಲ್ಲ. ಸರ್ಕಾರಿ ಶಾಲೆ ಇರಲಿ, ಸತ್ತರೆ ಹೂಳೋಕೆ ಸ್ಮಶಾನ ಕೂಡಾ ಈ ಊರಲ್ಲಿ ಇಲ್ಲ.
ಅರುಣ್ ಪ್ರಸಾದ್, ಪಬ್ಲಿಕ್ ನೆಕ್ಸ್ಟ್
PublicNext
01/02/2025 09:13 am