ಧಾರವಾಡ: ರಾಜ್ಯ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ದಿನದಿಂದ ದಿನಕ್ಕೆ ಅತಿರೇಕಕ್ಕೇರುತ್ತಿರುವ ಬೆನ್ನಲ್ಲೇ ಆರ್ಎಸ್ಎಸ್ ಪ್ರಮುಖರು ಧಾರವಾಡದ ಶಂಕರ ಮಠದ ಸಭಾಭವನದಲ್ಲಿ ಸಮನ್ವಯ ಬೈಠಕ್ ನಡೆಸಿದರು.
ಈ ಬೈಠಕ್ನಲ್ಲಿ ಸ್ವತಃ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಭಾಗಿಯಾಗಿದ್ದರು. ಆಂತರಿಕ ಬಿಕ್ಕಟ್ಟಿನಿಂದ ಪಕ್ಷದ ಕಾರ್ಯಕರ್ತರ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ರಾಜ್ಯಾಧ್ಯಕ್ಷರ ವಿವಾದ ಪರಿಹಾರವಾಗುವವರೆಗೆ ಮಾತಿನ ಮೇಲೆ ನಿಗಾ ಇರಬೇಕು ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂಬ ಖಡಕ್ ಸಂದೇಶವನ್ನು ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ.
ಪ್ರತಿ ಆರು ತಿಂಗಳಿಗೊಮ್ಮೆ ನಡೆಯುವ ಈ ಸಮನ್ವಯ ಬೈಠಕ್ ಈ ಬಾರಿ ಧಾರವಾಡದ ಯಾಲಕ್ಕಿ ಶೆಟ್ಟರ ಕಾಲೊನಿಯ ಶಂಕರ ಮಠದಲ್ಲಿ ನಡೆಸಲಾಗಿದ್ದು, ಎರಡು ದಿನಗಳವರೆಗೆ ನಡೆದ ಬೈಠಕ್ನಲ್ಲಿ ಬಹುತೇಕ ಸಮಯವನ್ನು ಬಿಜೆಪಿ ಪಕ್ಷದ ಆಂತರಿಕ ತಿಕ್ಕಾಟಕ್ಕಾಗಿಯೇ ಮೀಸಲಿಡುವಂತಾಯಿತು.
ಅಲ್ಲದೇ ಪಕ್ಷದ ಮುಖಂಡರು ಎರಡು ಗುಂಪುಗಳಾಗಿ ತಮಗೆ ತಿಳಿದಂತೆ ಹೇಳಿಕೆ ನೀಡುತ್ತ ಸಾಗುತ್ತಿರುವುದು ಪಕ್ಷದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದು, ಕೆಲವೇ ದಿನಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಲ್ಲಿಯವರೆಗೆ ಪಕ್ಷದ ಸಂಘಟನೆಯತ್ತ ಒತ್ತು ನೀಡಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಒಂದೆಡೆ ಬಸನಗೌಡ ಪಾಟೀಲ ಯತ್ನಾಳ ತಂಡ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ತೀವ್ರ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕುತ್ತಿದ್ದರೆ, ಇತ್ತ ಬಿ.ವೈ. ವಿಜಯೇಂದ್ರ ತಂಡ ಒಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದೆ.
ಇದು ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ. ಅದಕ್ಕಾಗಿ ಎಲ್ಲರೂ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ನಿಮ್ಮೆಲ್ಲ ಆಂತರಿಕ ಬಿಕ್ಕಟ್ಟನ್ನು ಸದ್ಯದ ಮಟ್ಟಿಗೆ ಕೈಬಿಡಬೇಕು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೇ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿರುವ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದನ್ನು ತಡೆಗಟ್ಟಬೇಕು. ಹಿಂದೂಗಳಿಗೆ ರಕ್ಷಣೆ ನೀಡಬೇಕು. ಇದಕ್ಕಾಗಿ ಆರ್ಎಸ್ಎಸ್ನ ಎಲ್ಲ ಸಂಘಟನೆಗಳು ಒಟ್ಟಾಗಿ ಶ್ರಮಿಸಬೇಕಿದೆ. ಇದಲ್ಲದೇ ದೇಶ ಮತ್ತು ರಾಜ್ಯದಲ್ಲಿಯೂ ಹಿಂದೂಗಳ ಪರಿಸ್ಥಿತಿ ಏನಾಗಿದೆ. ಅವರನ್ನು ಯಾವ ರೀತಿಯಲ್ಲಿ ಮುನ್ನೆಲೆಗೆ ತರಬೇಕಿದೆ ಎನ್ನುವುದರ ಕುರಿತು ಭೈಟಕ್ನಲ್ಲಿ ಚರ್ಚೆ ಮಾಡಲಾಗಿದೆ.
ಸಿ.ಟಿ.ರವಿ ಮತ್ತು ಹೆಬ್ಬಾಳ್ಕರ ಮಧ್ಯೆ ನಡೆದ ಘಟನೆಯ ಕುರಿತು ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದ್ದು, ಇದರ ಬಗ್ಗೆ ಪ್ರಮುಖರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಬೈಠಕ್ನಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸುನೀಲಕುಮಾರ ಕಾರಕಳ ಕೂಡ ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/01/2025 05:15 pm