ಮುಲ್ಕಿ: ಹಳೆಯಂಗಡಿಯ ಇಂದಿರಾ ನಗರದ ಕೊಂಕಣ ರೈಲ್ವೆ ಗೇಟ್ ಗೆ ಪಿಕಪ್ (ಕೆಎ 19ಎಬಿ9071) ಚಾಲಕನ ನಿರ್ಲಕ್ಷ ಚಾಲನೆಯಿಂದ
ಡಿಕ್ಕಿ ಹೊಡೆದು ರೈಲ್ವೇ ಗೇಟ್ ಗೆ ಹಾನಿಯಾದ ಘಟನೆ ಬುಧವಾರ ಬೆಳಗ್ಗೆ 9:15ರ ಸುಮಾರಿಗೆ ನಡೆದಿದೆ. ಹಳೆಯಂಗಡಿಯ ಇಂದಿರಾ ನಗರ ರೈಲ್ವೇ ಗೇಟ್ ಬಳಿ ಬುಧವಾರ ಬೆಳಿಗ್ಗೆ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರೈಲು ಬರುವ ಸಂದರ್ಭ ಗೇಟ್ ಸಿಬ್ಬಂದಿ ರೈಲ್ವೇ ಗೇಟ್ ಹಾಕಿದ್ದಾನೆ.
ಈ ಸಂದರ್ಭ ಕಿನ್ನಿಗೋಳಿ ಕಡೆಯಿಂದ ಹಳೆಯಂಗಡಿ ಕಡೆಗೆ ಬರುತ್ತಿದ್ದ ಪಿಕಪ್ ಅದರ ಚಾಲಕ ತರಾತುರಿಯಲ್ಲಿ ವಾಹನವನ್ನು ಪಾಸ್ ಮಾಡಲು ಯತ್ನಿಸಿದ್ದು , ಪಿಕಪ್ ರೈಲ್ವೇ ಗೇಟ್ ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಭಾರೀ ಶಬ್ದದೊಂದಿಗೆ ಗೇಟ್ ತುಂಡಾಗಿ ಬಿದ್ದಿದೆ.
ತುಂಡಾದ ಗೇಟ್ ರೈಲ್ವೇ ಹಳಿಯಲ್ಲಿ ಬೀಳದ ಕಾರಣ ಬಾರಿ ಅನಾಹುತ ತಪ್ಪಿದೆ.
ರೈಲು ಹೋದ ಬಳಿಕ ಸ್ಥಳದಲ್ಲಿ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದ್ದು ಕೂಡಲೇ ಗೇಟ್ ಕೀಪರ್ ಸಹಿತ ಸ್ಥಳೀಯರು ಸೇರಿ ತುಂಡಾದ ಗೇಟ್ ನ್ನು ಬದಿಗೆ ಸರಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಇದೇ ರೀತಿ ಪಿಕಪ್ ವಾಹನವೊಂದು ರೈಲ್ವೇ ಗೇಟ್ ಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿತ್ತು.
ಮಂಗಳೂರಿನಿಂದ ಹಳೆಯಂಗಡಿಯ ಇಂದ್ರ ನಗರ ರೈಲ್ವೇ ಗೇಟ್ ಮೂಲಕ ದಿನವೊಂದಕ್ಕೆ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿದ್ದು, ಈ ಭಾಗದಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರ ಬೇಡಿಕೆ ಹಲವಾರು ವರ್ಷಗಳಿಂದ ಇದ್ದು ಇನ್ನೂ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kshetra Samachara
29/01/2025 10:49 pm