ಚಾಮರಾಜನಗರ : ಪೊಲೀಸರಿಗೆ ಇರುವಷ್ಟೆ ಜವಾಬ್ದಾರಿ ಗೃಹರಕ್ಷಕ ದಳದ ಸಿಬ್ಬಂದಿಗೂ ಇರಲಿದೆ. ಹೀಗಾಗಿ ಪ್ರತಿ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗೃಹರಕ್ಷಕ ದಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೃಹರಕ್ಷಕ ಸಿಬ್ಬಂದಿ ಪೊಲೀಸರ ಜತೆ ಪ್ರತಿ ಹಂತದಲ್ಲೂ ಸಹಕಾರಿಯಾಗಿ, ಪೊಲೀಸ್ ವ್ಯವಸ್ಥೆಯ ಒಂದು ಭಾಗವಾಗಿದ್ದಾರೆ. ಜಾತ್ರೆ ಹಾಗೂ ಇತರೆ ಸಭೆ ಸಮಾರಂಭಗಳಲ್ಲಿ ಪೊಲೀಸರ ಜತೆ ಹೆಚ್ಚುವರಿಯಾಗಿ ಗೃಹರಕ್ಷಕದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳುತ್ತೇವೆ. ಹಾಗಾಗಿ ಪೊಲೀಸರಿಗೆ ಇರುವಷ್ಟೇ ಜವಾಬ್ದಾರಿ ಮತ್ತು ಒತ್ತಡ ಅವರಿಗೂ ಇರಲಿದೆ ಎಂದರು.
ಪೊಲೀಸರಂತೆ ಜವಾಬ್ದಾರಿ ಮತ್ತು ಹೆಚ್ಚು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಗೃಹರಕ್ಷಕದಳದ ಸಿಬ್ಬಂದಿ ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ ಮಾತನಾಡಿ, ಪೊಲೀಸರಂತೆ ಹೆಚ್ಚಿನ ಸಮಯ ಕೆಲಸ ನಿರ್ವಹಿಸುವ ಗೃಹರಕ್ಷಕ ಸಿಬ್ಬಂದಿ ಆರೋಗ್ಯದ ಜತೆಗೆ ಕುಟುಂಬದೊಂದಿಗೆ ಕಾಲ ಕಳೆಯಲು ಸಮಯ ನೀಡಬೇಕು. ಕೆಲವೊಂದು ಸಭೆ ಸಮಾರಂಭಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಗೃಹರಕ್ಷಕ ಸಿಬ್ಬಂದಿಗಳೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹೀಗಾಗಿ ವ್ಯವಸ್ಥೆಯಲ್ಲಿ ಗೃಹರಕ್ಷಕ ಸಿಬ್ಬಂದಿಯ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.
Kshetra Samachara
23/01/2025 06:06 pm