ವಿಜಯಪುರ: ನಗರದ ಜೈನಾಪುರ ಆರ್. ಸಿ ಯಲ್ಲಿ ದರೋಡೆ ನಡೆಸಿದ ಕಳ್ಳರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ನಗರದ ಸಂತೋಷ ಕನ್ನಾಳ ಎಂಬುವವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಮೊದಲ ಮಹಡಿಯಿಂದ ಕೆಳಗೆ ನೂಕಿದ್ದರು. ಅಲ್ಲದೇ, ಅವರ ಪತ್ನಿಯ ತಾಳಿ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದರು. ಗಾಯಗೊಂಡ ಸಂತೋಷ ಕನ್ನಾಳ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ತನಿಖೆಗೆ ವಿಶೇಷ ತಂಡಗಳನ್ನು ರಚನೆ ಮಾಡಿ ಖಚಿತ ಮಾಹಿತಿ ಮೇರೆಗೆ ನಸುಕಿನ ಜಾವದಿಂದಲೇ ಖದೀಮರ ಬೆನ್ನತ್ತಿದ ಖಾಕಿ ಪಡೆ ವಿಜಯಪುರ ನಗರದ ಹೊರಭಾಗದ ಟೋಲ್ ಪ್ಲಾಜಾ ಬಳಿ ಎನ್,ಎಚ್ 50 ಹತ್ತಿರ ಬೈಕ್ ನಲ್ಲಿ ತೆರಳುತ್ತಿದ್ದಾರೆ ಎಂದು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ್ದಾರೆ.
ಪೊಲೀಸರು ಬಂದಿರುವುದನ್ನ ಗಮನಿಸಿದ ದರೋಡೆಕೋರರು ತಕ್ಷಣ ಬೈಕನ್ನು ಅಲ್ಲಿಯೇ ಬಿಟ್ಟು ಜಮೀನಿನತ್ತ ಓಡಿದ್ದಾರೆ. ದರೋಡೆಕೋರರನ್ನು ಬೆನ್ನಟ್ಟಿದ ಪೊಲೀಸರು ಐದು ಜನರ ಗ್ಯಾಂಗ್ ಮೇಲೆ ಐದು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್ಐ ಘೋರಿ ಐದು ಸುತ್ತು ಗುಂಡು ಹಾರಿಸಿದರೂ ಖದೀಮರ ಗ್ಯಾಂಗ್ ಕತ್ತಲಲ್ಲಿ ಕಣ್ಮರೆಯಾಗಿದೆ.
ಆದರೂ ಪೊಲೀಸರು ಶೋಧ ಕಾರ್ಯ ಮುಂದುವರೆದಿದ್ದಾರೆ. ಆಗ ನಂತರ ಪೊಲೀಸರ ಗುಂಡು ಬಡಿದು ಜಮೀನಿನಲ್ಲಿ ಬಿದ್ದಿದ್ದ ಖದೀಮನೊಬ್ಬ ಸಿಕ್ಕಿ ಬಿದ್ದಿದ್ದಾನೆ. ಉಳಿದವರು ಪರಾರಿಯಾಗಿದ್ದಾರೆ. ಖದೀಮರು ಮಧ್ಯಪ್ರದೇಶದ ಮೂಲದವರು ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ಗುಂಡೇಟಿನಿಂದ ಗಾಯಗೊಂಡ ಓರ್ವ ದರೋಡೆಕೋರನಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್, ವಿಜಯಪುರ
PublicNext
17/01/2025 01:37 pm