ಬೆಂಗಳೂರು : ಮನೆಯ ಕೀಯನ್ನ ಶೂ, ಕಿಟಕಿಗಳು ಹೂಕುಂಡಗಳಲ್ಲಿ ಇರಿಸಿ ಹೋಗುವವರೇ ಎಚ್ಚರ. ಕೀ ಹಾಕಿದ ಬಳಿಕ ಅಕ್ಕಪಕ್ಕದಲ್ಲಿಟ್ಟು ತೆರಳುವವರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯಂತಿ ಬಂಧಿತ ಆರೋಪಿ. ಆರೋಪಿತಳ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.
ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ದಂಪತಿ ಡಿಸೆಂಬರ್ 19ರಂದು ಮನೆಯ ಕೀಯನ್ನ ಕಿಟಕಿಯ ಪಕ್ಕದಲ್ಲಿಟ್ಟು ತೆರಳಿದ್ದರು. ಆ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ್ದ ಆರೋಪಿ, ಬೀರುವಿನಲ್ಲಿಟ್ಟಿದ್ದ 172 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು 13 ಸಾವಿರ ನಗದು ದೋಚಿ ಪರಾರಿಯಾಗಿದ್ದಳು. ಮಾಲೀಕ ದಂಪತಿ ಮನೆ ಬಳಿ ಬಂದು ನೋಡಿದಾಗ ಕಿಟಕಿಯ ಪಕ್ಕದಲ್ಲಿಟ್ಟಿದ್ದ ಕೀ ನಾಪತ್ತೆಯಾಗಿತ್ತು. ಬಳಿಕ ಮತ್ತೊಂದು ಕೀಯಿಂದ ಬಾಗಿಲನ್ನು ತೆರೆದು ಗಮನಿಸಿದಾಗ ಕಳ್ಳತನವಾಗಿರುವುದು ಬಯಲಾಗಿತ್ತು.ಪತಿ ಹಾಗೂ 4 ಮಕ್ಕಳೊಂದಿಗೆ ವಾಸವಿದ್ದ ಜಯಂತಿ, ತನಗೆ ಖರ್ಚಿಗೆ ಹಣ ಬೇಕೆನಿಸಿದಾಗ ಮನೆಗಳ್ಳತನಕ್ಕಿಳಿಯುತ್ತಿದ್ದಳು. ಈ ಹಿಂದೆಯೂ ಸಹ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ಮನೆಗಳ್ಳತನ ಮಾಡಿರುವ ಆರೋಪಿಯ ವಿರುದ್ಧ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು.
ಬಂಧಿತಳು ಕಮ್ಮನಹಳ್ಳಿಯಲ್ಲಿರುವ ಜ್ಯುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 7.80 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
PublicNext
15/01/2025 06:21 pm