ಚಾಮರಾಜನಗರ : ರಾಜ್ಯದ ಪ್ರಸಿದ್ದ ಯಾತ್ರಾಸ್ಥ ಳಗಳಲ್ಲಿ ಒಂದಾದ ಬಿಳಿಗಿರಿರಂಗನಬೆಟ್ಟದಲ್ಲಿ ಬುಧವಾರ ಬಿಳಿಗಿರಿರಂಗನಾಥಸ್ವಾಮಿ ಸಂಕ್ರಾಂತಿ ಚಿಕ್ಕ ಜಾತ್ರೆ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಪ್ರತಿ ಸಂವತ್ಸರದ ವೈಶಾಖ ಮಾಸದ ಚಿತ್ತ ನಕ್ಷತ್ರದ ದಿನ ರಥೋತ್ಸವ ನಡೆಯಲಿದೆ. ಅದರಂತೆ ಬುಧವಾರ ಬೆಳಗ್ಗೆ ಬಿಳಿಗಿರಿರಂಗನಾಥ ಸ್ವಾಮಿ ಕಲ್ಯಾಣೋತ್ಸವ ನಡೆಸಲಾಯಿತು. ಬಳಿಕ ಬಣ್ಣ, ಬಣ್ಣದ ಬಟ್ಟೆ, ಕಬ್ಬು, ಬಾಳೆ ಕಂದು, ತಳಿರು, ತೋರಣಗಳಿಂದ ಲಂಕೃತಗೊಂಡಿದ್ದ ಚಿಕ್ಕ ರಥದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸುತ್ತಿದ್ದಂತೆ ಬೆಳಗ್ಗೆ 11.55 ರಿಂದ 12.06 ರೊಳಗೆ ಸಲ್ಲುವ ಮೀನಾ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಾವಿರಾರು ಭಕ್ತರ ಗೋವಿಂದ... ಗೋವಿಂದ... ಉದ್ಘೋಷದೊಂದಿಗೆ, ಶಂಖ-ಜಾಗಟೆ ನಿನಾದದೊಂದಿಗೆ ಸಾವಿರಾರು ಮಂದಿ ಚಿಕ್ಕ ತೇರನ್ನು ದೇವಾಲಯದ ಸುತ್ತ ಎಳೆದರು. ಈ ವೇಳೆ ಹರಕೆ ಹೊತ್ತ ಭಕ್ತರು ಹಾಗೂ ನವದಂಪತಿಗಳು ಹಣ್ಣು-ಧವನವನ್ನು ತೇರಿಗೆ ಅರ್ಪಿಸಿ ತಮ್ಮ ಹರಕೆ ಪೂರೈಸಿದರು. ಇನ್ನು ರೈತರು ತಾವು ಬೆಳೆದಿದ್ದ ದವಸ-ಧಾನ್ಯಗಳನ್ನು ನೀಡಿ ಮುಂದಿನ ದಿನಗಳಲ್ಲಿ ಮಳೆ-ಬೆಳೆ ಸಮೃದ್ಧಿಯಾಗಲಿ ಎಂದು ಬಿಳಿಗಿರಿರಂಗನನ್ನು ಪ್ರಾರ್ಥಿಸಿದರು.
ಚಿಕ್ಕ ಜಾತ್ರೆಗೆ ಜಿಲ್ಲೆಯಲ್ಲದೇ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಈ ನಿರೀಕ್ಷೆಯನ್ನು ಮೊದಲೇ ಹೊಂದಿದ್ದ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ಭಕ್ತರ ಅನುಕೂಲಕ್ಕೆ ಬಸ್ ಸೌಲಭ್ಯ, ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ನಾನಾ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ರಥೋತ್ಸವ ಪೂರ್ಣಗೊಂಡ ಬಳಿ ಅರವಟ್ಟಿಗೆ (ದೀಪದ) ಉತ್ಸವ ನಡೆಸಲಾಯಿತು. ಬೇರೆ ಬೇರೆ ಗ್ರಾಮಗಳ ಭಕ್ತರು ತಾವು ಹಾಕಿಕೊಂಡಿದ್ದ ಮಂಟಪಗಳಿಗೆ ಉತ್ಸವ ಮೂರ್ತಿಯನ್ನು ಆಹ್ವಾನಿಸಿದರು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಮೊರೆಯಿಟ್ಟರು. ಈ ವೇಳೆ ಪಾನಕ, ಮಜ್ಜಿಗೆ, ಕೋಸಂಬರಿ, ಪಂಚಾಮೃತ ನೈವೇದ್ಯ ಮಾಡಿ ವಿತರಿಸಲಾಯಿತು.
ಚಿಕ್ಕ ಜಾತ್ರೆಗೆ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾದರು. ಭಕ್ತರ ಉದ್ಘೋಷ, ಜಾಗಟೆಯ ಸದ್ದು ಹಾಗು ಶಂಖನಾದ ಮುಗಿಲು ಮುಟ್ಟಿತು. ಬಿಳಿಗಿರಿರಂಗನಾಥ ಸ್ವಾಮಿಯು ಸೋಲಿಗರ ಬಾಲೆ ಕುಸುಮಾಲೆಯ ಅಂದಕ್ಕೆ ಸೋತು ಆಕೆಯನ್ನು ವರಿಸಿದ ಎಂಬ ಪುರಾಣ ಕಥೆಯಿದೆ ಹಾಗಾಗಿ ಬುಡಕಟ್ಟು ಸೋಲಿಗರು ಬಿಳಿಗಿರಿ ರಂಗನಾಥಸ್ವಾಮಿಯನ್ನು ತಮ್ಮ ಭಾವ ಎಂದೆ ಸಂಭೋದಿಸುತ್ತಾರೆ. ಹಾಗಾಗಿ ಬಿಳಿಗಿರಿರಂಗನಬೆಟ್ಟದ ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಸೋಲಿಗರು ಸಂಭ್ರಮದಿಂದ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.
Kshetra Samachara
15/01/2025 04:57 pm