ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಂಕ್ರಮಣದೊಂದಿಗೆ ಜಾನಪದ ಲೋಕ ಅನಾವರಣ- ಉದ್ಯಾನದಲ್ಲಿ ಭೂರಿ ಭೋಜನ

ಧಾರವಾಡ: ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ. ಸಂಕ್ರಮಣದಂದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣದ ಕಡೆ ತನ್ನ ಪಥ ಬದಲಿಸುವ ಕಾಲ. ಮಾಗಿಯ ಚಳಿ ಮಾಯವಾಗುತ್ತ ಬರುವ ಕಾಲ. ಈ ಹಬ್ಬ ಬಂತೆಂದರೆ ಸಾಕು ಎಲ್ಲೆಡೆ ಸಂಭ್ರಮವೋ ಸಂಭ್ರಮ. ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತ ಬರುತ್ತಾರೆ. ಹಳ್ಳಿಯ ಸೊಗಡನ್ನು ನೆನಪಿಸುವ ಹಾಗೆ ಧಾರವಾಡದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ.

ಹೌದು! ಹೀಗೆ ಜರತಾರಿ, ರೇಷ್ಮೆ ಸೀರೆಯುಟ್ಟ ಮಹಿಳೆಯರ ವೈಯ್ಯಾರ, ಮೈತುಂಬ ಚಿನ್ನದ ಆಭರಣ ಧರಿಸಿರುವ ಮಹಿಳೆಯರು ಒಂದೆಡೆಯಾದರೆ, ಮತ್ತೊಂದೆಡೆ ಭಕ್ಷ್ಯ ಭೋಜನದ ತರಹೇವಾರಿ ಪದಾರ್ಥಗಳ ಸಾಲು ಸಾಲು. ಇದಕ್ಕೆಲ್ಲ ಸಂಭ್ರಮದ ತೋರಣ ಕಟ್ಟಿದಂತಿರುವ ಜಾನಪದ ಹಾಡುಗಾರಿಕೆ. ಇದೆಲ್ಲವೂ ಕಂಡು ಬಂದಿದ್ದು ಧಾರವಾಡದ ಸಾಧನಕೇರಿ ಉದ್ಯಾನವನದಲ್ಲಿ.

ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಎನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ಮರೆತು ಹೋದ ನಮ್ಮ ಜಾನಪದ ಸಂಸ್ಕೃತಿಯನ್ನು ನೆನಪಿಗೆ ತರುವ ಪ್ರಯತ್ನವನ್ನು ಮಾಡಲಾಯಿತು. ಒಂದು ಕಡೆ ಜಾನಪದ ವಿದ್ವಾಂಸರಿಂದ ಜಾನಪದ ಗೀತೆಗಳ ಮಾಧುರ್ಯ ಬರುತ್ತಿದ್ದರೆ, ಅದಕ್ಕೆ ತಕ್ಕಂತೆ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮಹಿಳೆಯರು ಜಾನಪದ ಹಾಡನ್ನು ಹಾಡಿ ಸಂಭ್ರಮಿಸಿದರು. ಇನ್ನು ಉಳಿದವರೆಲ್ಲರೂ ಕೂಡ ಹಾಡಿಗೆ ಧ್ವನಿಗೂಡಿಸಿ ಚಪ್ಪಾಳೆ ತಟ್ಟಿದರು. ಈ ಮೂಲಕ ಮರೆತು ಹೋಗುತ್ತಿರುವ ಜಾನಪದ ಸಂಪ್ರದಾಯ ಹಾಗೂ ಜಾನಪದೀಯ ಗೀತೆಗಳನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನ ಮಾಡಿದರು.

ಇನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿ ಮಹಿಳೆಯರು ಕೂಡ ತರಹ ತರಹದ ಭಕ್ಷ್ಯಗಳನ್ನು ಮಾಡಿಕೊಂಡು ಬಂದಿದ್ದರು. ಸಂಕ್ರಮಣದ ಪ್ರಮುಖ ಸಿಹಿ ಪದಾರ್ಥ ಮಾದಲಿ ಜೊತೆಗೆ ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಬದನೆಕಾಯಿ, ವಿವಿಧ ಕಾಳಿನ ಪಲ್ಯ, ನಾನಾ ಬಗೆಯ ಚಟ್ನಿಗಳನ್ನು ಮಾಡಿಕೊಂಡು ಬಂದಿದ್ದರು.

ಉದ್ಯಾನದಲ್ಲಿಯೇ ಗಂಗಾ ದೇವಿಯನ್ನು ಪ್ರತಿಷ್ಠಾಪಿಸಿ, ಸಾಂಕೇತಿಕವಾಗಿ ಪೂಜೆ ಮಾಡಿದ ಬಳಿಕ ಎಲ್ಲರೂ ತಾವು ತಂದಿದ್ದ ಆಹಾರ ಪದಾರ್ಥಗಳನ್ನು ವಿನಿಮಯ ಮಾಡಿಕೊಂಡು ಸವಿದರು.

ಒಟ್ಟಿನಲ್ಲಿ ಸಾಂಸ್ಕೃತಿಕ ನಗರಿ ಎಂಬ ಧಾರವಾಡದ ಖ್ಯಾತಿಗೆ ಮೆರಗು ತರುವ ನಿಟ್ಟಿನಲ್ಲಿ ನಡೆದ ಈ ಪುಟ್ಟ ಸಂಕ್ರಮಣ ಸಂಭ್ರಮ ಜಾನಪದದ ಕೊಡು-ಕೊಳ್ಳುವಿಕೆಯ ಪ್ರತೀಕವಾಗಿ ಹೊರಹೊಮ್ಮಿತು.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/01/2025 07:35 pm

Cinque Terre

151.45 K

Cinque Terre

3

ಸಂಬಂಧಿತ ಸುದ್ದಿ