ಬ್ರಹ್ಮಾವರ: ಉಡುಪಿ ಜಿಲ್ಲೆಯ ಮಂದಾರ್ತಿ ಬಳಿಯ ಮುದ್ದುಮನೆಯಲ್ಲಿ 12 ರಾತ್ರಿಗಳ ವರೆಗೆ ನಡೆಯುವ ಪಾಣರಾಟ ಎನ್ನುವ ವಿಶಿಷ್ಟ ಆಚರಣೆ 2 ವರ್ಷಕ್ಕೊಮ್ಮೆ ನಡೆಯುತ್ತಿದ್ದು, ಮಕರ ಸಂಕ್ರಾಂತಿ ದಿನ ಮುಕ್ತಾಯಗೊಳ್ಳುತ್ತದೆ.
ಇಲ್ಲಿನ ಮುದ್ದುಸ್ವಾಮಿ ದೇವಸ್ಥಾನದ ನೈಸರ್ಗಿಕವಾದ ಹುತ್ತಕ್ಕೆ ಪೂಜಾವಿಧಿ ನಡೆಸುವವರು ಬಂಟ ಅರ್ಚಕರು. ಜನವರಿ 2ರಿಂದ ಮಕರ ಸಂಕ್ರಾಂತಿಯ ತನಕ ಹನ್ನೆರಡು ರಾತ್ರಿ ನಡೆಯುವ ಪಾಣರಾಟದಲ್ಲಿ ಪಾಡ್ದನ ಪಾಣರಾಟ, ಅಣಿ ಸೇವೆ, ಮದುವೆ ಕೋಲ, ಬಸುರಿ ಕೋಲ, ಕಂಬಳದ ಕೋಲ, ಕಟ್ಟುಕಟ್ಟಳೆ ಕೋಲ... ಹೀಗೆ ಹನ್ನೆರಡು ದಿನ ಪಾಣರಾಟ ಸೇವೆ ಜರುಗುತ್ತವೆ. ಈ ಸಂದರ್ಭ ನಾನಾ ಭಾಗಗಳಲ್ಲಿ ನೆಲೆಸಿರುವ ನೂರಾರು ಪಾಣರು ದೈವ-ದೇವರುಗಳ ವೇಷ ಧರಿಸಿ, ದೇವರ ಪರಿಚಯ, ಸ್ಥಳ ಮಹಾತ್ಮೆ ದೈವ-ದೇವರು ಭಕ್ತರನ್ನು ಕಾಪಾಡುವ ಕುರಿತು ಸಮಗ್ರ ವಿವರಣೆ ನೀಡುತ್ತಾರೆ.
ಇಲ್ಲಿನ ಭೂತರಾಯನ ಅಣಿಕೋಲದಲ್ಲಿ 40 ಅಡಿ ಎತ್ತರದ ವಿಶಿಷ್ಟ ಆಕೃತಿಯ ಅಣಿಯನ್ನು ತಯಾರಿಸಿ, ಅದನ್ನು ಹೊತ್ತು ಕುಣಿಯುವ ದೃಶ್ಯ ಮೈ ನವಿರೇಳಿಸುತ್ತದೆ. ಆವೇಶಭರಿತ ಅಣಿ ಹೊತ್ತವರು ಮುದ್ದುಸ್ವಾಮಿ ದೇವಸ್ಥಾನದಿಂದ ಹೊರಟು ಸೀತಾನದಿ ತೀರದ ನಿರ್ದಿಷ್ಟ ಸ್ಥಳದಲ್ಲಿ ಅಣಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ಅಣಿ ಮೆರವಣಿಗೆ ಹೋಗುವಾಗ ಊರಿನಲ್ಲಿ ಯಾರೂ ನಿದ್ದೆ ಮಾಡುತ್ತಿರಬಾರದು. ಊಹೆಗೂ ನಿಲುಕದೆ ಇಂದಿಗೂ ಪ್ರಾಚೀನ ಆರಾಧನೆಯ ವಿಶಿಷ್ಟ ಆಚರಣೆಯನ್ನು ಕೆಲವು ಸೇವಾನಿಷ್ಠ ನಿರತ ಕುಟುಂಬಿಕರಿಂದ ಮತ್ತು ಊರವರಿಂದ ಮುನ್ನಡೆಯುತ್ತಿರುವುದು ಅಚ್ಚರಿಯೇ ಸರಿ!
-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ
PublicNext
14/01/2025 05:19 pm