ಬ್ರಹ್ಮಾವರ: ಕರಾವಳಿ ಜಿಲ್ಲೆಯ ಅನೇಕ ಜಾತಿ ಜನಾಂಗದವರ ಮೂಲ ನಾಗಬನ ಎಂದೇ ಪ್ರಸಿದ್ಧಿ ಪಡೆದ ಬಾರಕೂರು ಬಂಡೀಮಠ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕ್ಷೇತ್ರ ನಾಗರಡಿಯಲ್ಲಿ ಮಕರ ಸಂಕ್ರಮಣ ಉತ್ಸವ ಹಾಗೂ ನಾಗಮಂಡಲ ಜನವರಿ 13ರಿಂದ ಆರಂಭಗೊಂಡಿದ್ದು, ಜನವರಿ 14ರ ವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ.
ಸೋಮವಾರ ಬೆಳಿಗ್ಗೆ ಊರಿನ ದೇವಸ್ಥಾನಗಳಾದ ಬಡಗಣಪತಿ ದೇವಸ್ಥಾನದಲ್ಲಿ ಗಣಹೋಮ, ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತರುದ್ರಾಭಿಷೇಕ, ಕಲ್ಪೋಕ್ತ ಮಹಾಪೂಜೆ, ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ನಾಗರಡಿಯಲ್ಲಿ ಋಖ್ ಸಂಹಿತಾ ಪಾರಾಯಣ, ಮಹಾಪೂಜೆಯ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.
ಸಹಸ್ರಾರು ವರ್ಷಗಳ ಹಳೆ ಮರವೊಂದರ ಅಡಿಯಲ್ಲಿ ನಾಗ ಸಾನಿಧ್ಯ ಇದ್ದು, ನಾಡಿನ ಅನೇಕ ಕುಟುಂಬಿಕರು ಪ್ರತಿಷ್ಠಾಪಿಸಿದ ಶಿಲೆಗಳಿಗೆ ನಾನಾ ಪೂಜೆ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿರುವ ನಾಗರಡಿಯನ್ನು ಊರ ಜನರು 38 ವರ್ಷಗಳ ಹಿಂದೆ ಸಮಿತಿಯೊಂದನ್ನು ರಚಿಸಿ ಈಗಾಗಲೇ ಭಕ್ತರ ನೆರವಿನಿಂದ 2 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿದೆ. ಉತ್ತರಾಯಣ ಆರಂಭದ ಮೊದಲ ದಿನದಂದು ನಡೆಯುವ ನಾಗಮಂಡಲದ ಪ್ರಥಮ ಸೇವೆ ಇಲ್ಲಿಂದ ಆರಂಭವಾಗುವುದು ವಾಡಿಕೆಯಂತೆ ಮಂಗಳವಾರ ಮುಂಜಾನೆ 5 ಗಂಟೆಗೆ ಢಕ್ಕೆ ಬಲಿ, ಚತು:ಪವಿತ್ರ ನಾಗಮಂಡಲ ಸೇವೆ ಜರುಗಲಿದೆ.
-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್
Kshetra Samachara
14/01/2025 09:41 am