ಚಿತ್ರದುರ್ಗ: ವಚನಗಳು ಪಠ್ಯಕ್ಕೆ ಮಾತ್ರ ಸೀಮಿತವಲ್ಲ. ವಿದ್ಯಾರ್ಥಿಗಳು ಅವುಗಳ ಆಳ-ಅಗಲ ತಿಳಿದಾಗ ಮಾತ್ರ ಮಹನೀಯರ ಚಿಂತನೆಗಳನ್ನು ಅರ್ಥೈಸಿಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಿದ್ಧರಾಮೇಶ್ವರರು ಇಂತಹದೇ ಜಾತಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಜನಿಸಲಿಲ್ಲ. ಅವರ ಕೊಡುಗೆಗಳು ಸಹ ಒಂದು ಜಾತಿಗೆ ಸೀಮಿತವಾಗಿಲ್ಲ. ಸಮಾಜದ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿದರು. ಭಕ್ತಿ ಹಾಗೂ ಕಾಯಕ ನಿಷ್ಠೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಿದ್ಧರಾಮೇಶ್ವರರು ಕೈಗೊಂಡರು. ಅವರ ವಚನಗಳು ಇಂದಿನ ಸಮಾಜದಲ್ಲೂ ಪ್ರಸ್ತುತ ಎನಿಸಿವೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಸಿದ್ಧರಾಮೇಶ್ವರರು ವಿಶ್ವ ಮಾನವರಾಗಿದ್ದಾರೆ ಎಂದರು.
ಭೋವಿ ಸಮಾಜದವರು ಶ್ರಮ ಜೀವಿಗಳಾಗಿದ್ದು, ಕಾಯಕ ನಿಷ್ಠೆ ಹೊಂದಿದ್ದಾರೆ. ಶಿಕ್ಷಣ ಹಾಗೂ ಸಂಘಟನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಚಿತ್ರದುರ್ಗ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಬಿ.ಎಂ.ಗುರುನಾಥ ಉಪನ್ಯಾಸ ನೀಡಿ, ಸಿದ್ಧರಾಮರು ಲೋಕೋಪಯೋಗಿ, ಜನಹಿತ ಕಾರ್ಯಗಳಿಂದ ಎಲ್ಲರ ಬದುಕನ್ನು ಬೆಳೆಸಿದವರು ಹಾಗೂ ಬೆಳಗಿಸಿದವರು. ಲೋಕೋಪಯೋಗಿ ಶರಣ ಸಿದ್ದರಾಮರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಯಾವ ವ್ಯಕ್ತಿ, ವ್ಯಕ್ತಿತ್ವ ಜನಸಮುದಾಯದಲ್ಲಿ ಉಳಿಯುತ್ತಾರೆಯೋ ಆ ವ್ಯಕ್ತಿಯ ನಡೆ-ನುಡಿ ಚಂದ ಹಾಗೂ ಸತ್ಯವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.
ಭಕ್ತನಾದರೆ ಬಸವಣ್ಣನಾಗಬೇಕು. ಜಂಗಮನಾದರೆ ಪ್ರಭುವಿನಂತಾಗಬೇಕು. ಭೋಗಿಯಾದರೆ ನಮ್ಮ ಶ್ರೀಗುರು ಚನ್ನಬಸವಣ್ಣನಂತಾಗಬೇಕು. ಯೋಗಿಯಾದರೆ ನನ್ನಂತಾಗಬೇಕು ಎಂಬ ಸಿದ್ದರಾಮರ ಆತ್ಮನಿವೇದನೆಯ ಮಾತು ಬಹಳ ಮುಖ್ಯವಾದದು. ಇದು ಸಿದ್ಧರಾಮರ ಗುಣವಿಶೇಷವು ಹೌದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಕೋಶಾಧ್ಯಕ್ಷ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ತಿಮ್ಮಣ್ಣ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಬಂಜಾರ ಸಮಾಜದ ಮುಖಂಡ ನರೇನಹಳ್ಳಿ ಅರುಣ್ ಕುಮಾರ್, ಸಮಾಜದ ಮುಖಂಡರಾದ ಭರತ್, ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
Kshetra Samachara
14/01/2025 04:17 pm