ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ವಿಜೃಂಭಣೆಯಿಂದ ಜರುಗಿದ ಚಂದ್ರಮಂಡಲೋತ್ಸವ

ಚಾಮರಾಜನಗರ: ತಾಲೂಕಿನ ಕಿಲಗೆರೆ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಚಂದ್ರಮಂಡಲೋತ್ಸವ ಆಚರಣೆ ಮಾಡಲಾಯಿತು.

ಪ್ರತಿವರ್ಷ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ದೇವಸ್ಥಾನದಲ್ಲಿ ನಡೆಯುವ ಚಂದ್ರಮಂಡಲೋತ್ಸವದ ದಿನದಂದೇ ಈ ಗ್ರಾಮದಲ್ಲೂ ಸಹ ಆಚರಣೆ ಮಾಡಲಾಗುತ್ತದೆ. ಅದರಂತೆಯೇ ಸೋಮವಾರ ರಾತ್ರಿ ದೇವಾಲಯದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಚೆನ್ನಾಜಮ್ಮ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ನಂತರ ದೇವಾಲಯದ ಸುತ್ತ ಮಂಗಳವಾದ್ಯ, ತಮಟೆ ಮೇಳಗಳೊಂದಿಗೆ ಸತ್ತಿ, ಸೂರಿಪಾನಿ, ದಾಳ, ನಂದಿಕಂಬದೊಂದಿಗೆ ಕಂಡಾಯ ಮೆರವಣಿಗೆ ಮಾಡಿ, ದೇವಸ್ಥಾನದ ಮುಂಭಾಗ ಬಿದಿರಿನಿಂದ ಚಂದ್ರಾಕಾರದಲ್ಲಿ ಕಟ್ಟಿದ ಮಂಡಲಕ್ಕೆ, ಹೊಂಬಾಳೆ, ಹೂಗಳಿಂದ ಶೃಂಗರಿಸಲಾಗಿತ್ತು.

ನಂತರ ಸಿದ್ದಪ್ಪಾಜಿ, ಮಂಟೇಸ್ವಾಮಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಚೆನ್ನಾಜಮ್ಮ ಎನ್ನುವ ಜಯ ಘೋಷದೊಂದಿಗೆ ಪೂಜೆ ಸಲ್ಲಿಸಿ, ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಆ ಚಂದ್ರಮಂಡಲವು ಪಶ್ಚಿಮ ದಿಕ್ಕಿಗೆ ಧಗ ಧಗನೆ ಹತ್ತಿ ಉರಿಯಿತು. ಚಂದ್ರಮಂಡಲ ಯಾವ ದಿಕ್ಕಿನ ಕಡೆಗೆ ಅತಿ ಹೆಚ್ಚಾಗಿ ಉರಿಯುತ್ತದೆಯೋ ಆ ದಿಕ್ಕಿನಲ್ಲಿ ಈ ವರ್ಷ ಚೆನ್ನಾಗಿ ಫಸಲು ಬೆಳೆಯುತ್ತದೆ ಎಂಬ ನಂಬಿಕೆ ಇದೆ.

ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಂದಿದ್ದಂತಹ ಭಕ್ತಾದಿಗಳು ಚಂದ್ರಮಂಡಲಕ್ಕೆ ತಾವು ತಂದಿದ್ದಂತಹ ದವಸ ಧಾನ್ಯಗಳನ್ನು ಎರಚಿ ಭಕ್ತಿ ಪರಾಭವ ಮೆರೆದರು.ನಂತರ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು. ಅಕ್ಕಪಕ್ಕದ ಗ್ರಾಮಗಳಿಂದಲೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

Edited By : PublicNext Desk
PublicNext

PublicNext

14/01/2025 12:34 pm

Cinque Terre

19.12 K

Cinque Terre

0