ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಲೇಷ್ಯಾ ಕಂಪನಿಯಲ್ಲಿ ಹಣ ಹೂಡಿದರೆ ಲಾಭಾಂಶ ನೀಡುವುದಾಗಿ 2 ಕೋಟಿ ವಂಚನೆ - 7 ಜನರ ಬಂಧನ

ಬೆಂಗಳೂರು: ಮಲೇಷ್ಯಾ ಕಂಪನಿಯಲ್ಲಿ ಹಣ ಹೂಡಿದರೆ ಒಂದೇ ದಿನದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ 2 ಕೋಟಿ ರೂಪಾಯಿ ವಂಚಿಸಿದ್ದ 7 ಆರೋಪಿಗಳನ್ನ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ಯಾಮ್ ಥಾಮಸ್, ಜೋಸ್ ಕುರುವಿಲ, ಜೀನ್ ಕಮಲ್, ಜಾಫರ್ ಸಾದಿಕ್ ಅಲಿಯಾಸ್ ದೀಪಕ್, ವಿಜಯ್ ಚಿಪ್ಲೋಂಕರ್ ಅಲಿಯಾಸ್ ರವಿ, ಅಮಿತ್ ಅಲಿಯಾಸ್ ದೀಪಕ್, ಊರ್ವಶಿ ಗೋಸ್ವಾಮಿ ಅಲಿಯಾಸ್ ಸೋನು ಬಂಧಿತರು. ಆರೋಪಿಗಳ ವಶದಿಂದ 44 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮಲೇಷ್ಯಾ ಮೂಲದ MEDB ಕ್ಯಾಪಿಟಲ್ ಬೆರ್ಹಾಡ್ ಎಂಬ ಹೆಸರಿನ ನಕಲಿ ಕಂಪನಿ‌ ಆರಂಭಿಸಿದ್ದ ಆರೋಪಿಗಳು,‌ ಹಣವಂತರನ್ನ ಗುರಿಯಾಗಿಸಿಕೊಂಡು ಸಂಪರ್ಕಿಸುತ್ತಿದ್ದರು. ಮಲೇಷ್ಯಾ ಮೂಲದ ತಮ್ಮ ಕಂಪನಿಯಲ್ಲಿ ಹಣ ಹೂಡಿದರೆ ಒಂದೇ ದಿನದಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ಇದೇ ರೀತಿ ಜಿಡಬ್ಲ್ಯೂಡಿ ಕಾಂಟ್ರ್ಯಾಕ್ಟರ್‌ವೋರ್ವರನ್ನ ಸಂಪರ್ಕಿಸಿದ್ದ ಆರೋಪಿತರು, ತಮ್ಮ ಕಂಪನಿಯಲ್ಲಿ 2 ಕೋಟಿ ರೂ ಹಣ ಹೂಡಿಕೆ ಮಾಡಿದರೆ ಒಂದೇ ದಿನದಲ್ಲಿ 3.50 ಕೋಟಿ ರೂ ಆರ್‌ಟಿಜಿಎಸ್ ಅಥವಾ ಎನ್ಇಎಫ್‌ಟಿ ಮೂಲಕ ವರ್ಗಾಯಿಸುವುದಾಗಿ ನಂಬಿಸಿದ್ದರು. ಆರೋಪಿಗಳ ಮಾತು ನಂಬಿದ್ದ ಕಾಂಟ್ರ್ಯಾಕ್ಟರ್, ಕಬ್ಬನ್ ಪೇಟೆಯಲ್ಲಿ ಆರೋಪಿಗಳ ತೆರೆದಿದ್ದ ಕಚೇರಿಗೆ ತೆರಳಿ 2 ಕೋಟಿ ರೂ ಹಣವನ್ನ ನೀಡಿದ್ದರು. ಆರಂಭದಲ್ಲಿ ಲಾಭಾಂಶವೆಂದು 9870 ರೂ ಹಣವನ್ನ ಕಾಂಟ್ರ್ಯಾಕ್ಟರ್ ಖಾತೆಗೆ ವರ್ಗಾಯಿಸಿದ್ದ ಆರೋಪಿಗಳು, ಉಳಿದ ಹಣ ಆದಷ್ಟು ಬೇಗ ನಿಮ್ಮ ಖಾತೆಗೆ ಜಮೆಯಾಗುತ್ತದೆ ಎಂದು ನಂಬಿಸಿದ್ದರು. ಬಳಿಕ ಈ ಕಚೇರಿಯಲ್ಲಿ ಲಾಕರ್ ವ್ಯವಸ್ಥೆಯಿಲ್ಲ, ಸುರಕ್ಷತೆಯ ದೃಷ್ಟಿಯಿಂದ ಬೇರೆ ಕಚೇರಿಯಲ್ಲಿ ಹಣ ಇರಿಸುವುದಾಗಿ ತೆರಳಿದ್ದ ಆರೋಪಿಗಳು ವಾಪಸ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ ತಾವು ಮೋಸ ಹೋದ ವಿಚಾರ ತಿಳಿದ ಕಾಂಟ್ರ್ಯಾಕ್ಟರ್ ಡಿಸೆಂಬರ್ 11ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಅದೇ ದಿನ ಮೂವರು ಆರೋಪಿಗಳನ್ನ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿಯನ್ವಯ ಇನ್ನೂ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಪಿನ್ ಮಲೇಷ್ಯಾದಲ್ಲಿ ಕುಳಿತು ವಂಚನೆಯ ಜಾಲ ನಡೆಸುತ್ತಿದ್ದ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ಕಿಂಗ್ ಪಿನ್ ಸೇರಿದಂತೆ ಇನ್ನೂ ಮೂವರು ಆರೋಪಿಗಳ ಪತ್ತೆಗಾಗಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Suman K
PublicNext

PublicNext

13/01/2025 04:16 pm

Cinque Terre

17.47 K

Cinque Terre

0