ಬೈಲಹೊಂಗಲ: ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025 ಜಾನಪದ ಕಲಾಮೇಳಕ್ಕೆ ಅದ್ದೂರಿಯಾಗಿ ಚಾಲನೆ ದೊರೆತು ನೋಡುಗರ ಕಣ್ಮನ ಸೆಳೆಯಿತು.
ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ,ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ತಾಪಂ ಇಒ ಕಿರಣ ಘೋಪಡೆ,, ತಹಶೀಲ್ದಾರಎಚ್.ಎನ್.ಶಿರಹಟ್ಟಿ, ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಬ್ರಿಟಿಷರ ವಿರುದ್ಧ ವೀರಪರಾಕ್ರಮ ಮೆರೆದ ರಾಯಣ್ಣನ ತ್ಯಾಗಬಲಿದಾನಗಳನ್ನು ಕಲಾಮೇಳ ನೆನಪಿಸುವಂತೆ ಮಾಡಿತು. ಉತ್ಸವದ ಢಮರುಗಗಳು ಕಿತ್ತೂರು ಇತಿಹಾಸದ ರಣಕಹಳೆಯ ಸಂಕೇತವಾಗಿ ಭಾಸವಾದವು. ಡೊಳ್ಳುಗಳು ಕ್ರಾಂತಿಯ ಧ್ವನಿಯನ್ನು ಹೊರ ಹಾಕಿದವು. ಸತ್ಯದ, ಶೌರ್ಯದ ನೀನಾದವನ್ನೂ ವ್ಯಕ್ತಗೊಳಿಸಿದವು. ಸಂಗೊಳ್ಳಿ ಉತ್ಸವದ ಅಂಗವಾಗಿ ರಾಯಣ್ಣ ಪ್ರತಿಮೆಗೆ ಶಾಸಕ ಮಹಾಂತೇಶ ಕೌಜಲಗಿ, ಎಸಿ ಪ್ರಭಾವತಿ ಫಕೀರಪೂರ, ಗ್ರಾಪಂ ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ನಾಗರಾಜ, ವಿದ್ಯಾವತಿ ಭಜಂತ್ರಿ ಗೌರವ ಸಮರ್ಪಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಿದರಿಗೆ ಗ್ರಾಮಸ್ಥರು ಬಣ್ಣಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಬರಮಾಡಿಕೊಂಡರು. ಗ್ರಾಮದ ಪ್ರತಿಯೊಂದು ಬೀದಿಗಳು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಕಲಾಮೇಳ ತಂಡಗಳಿಗೆ ರಾಗಿ ಅಂಬಲಿ, ಕುಡಿಯುವ ನೀರು ವಿತರಿಸಲಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡಿಜೆ ಸೌಂಡಗೆ ಯುವ ಪಡೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಪ್ರಾಥಃ ಕಾಲ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜೆ ನೆರವೇರಿಸಲಾಯಿತು. ಎಸಿ ಪ್ರಭಾವತಿ ಫಕೀರಪುರ ನಂದಿ ಧ್ವಜಾರೋಹಣ ನೆರವೇರಿಸಿದರು. ಜಾನಪದ ಕಲಾ ಮೇಳ ಮೆರವಣಿಗೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಯ ಕಲಾವಿದರು ತಮ್ಮ ಕಲಾ ಪ್ರದರ್ಶನದ ಮೂಲಕ ಜನ, ಮನ ಗೆದ್ದರು.
ಶರೀಫ ನದಾಫ ಪಬ್ಲಿಕ್ ನೆಕ್ಸ್ಟ್ ಬೈಲಹೊಂಗಲ
Kshetra Samachara
13/01/2025 12:23 pm