ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ 50 ನೇ ಜನ್ಮ ವರ್ಷಾಚರಣೆ ಅಂಗವಾಗಿ ಇಲ್ಲಿನ ಗುರುಭವನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಮೇಳದಲ್ಲಿ 1196 ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಮೇಳ ಯಶಸ್ವಿಯಾಯಿತು.
ಲೋಯಲ ವಿಕಾಸ ಕೇಂದ್ರ, ರೋಶನಿ ಟ್ರಸ್ಟ್, ಉದ್ಯೋಗ ಸಮೃದ್ಧಿ ಕೇಂದ್ರ ಸೇರಿದಂತೆ ನಾನಾ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಬಿರ ಉದ್ಯೋಗಾಕಾಂಕ್ಷಿಗಳ ದಂಡೇ ಹರಿದು ಬಂದಿತ್ತು. ಸ್ಥಳದಲ್ಲಿ ಒಟ್ಟು 1720 ಜನರ ನೋಂದಣಿ ಮಾಡಿಕೊಳ್ಳಲಾಯಿತು.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೋಮಾ ತೇರ್ಗಡೆಯಾದವರು ಮತ್ತು ಪದವೀಧರರು ಸೇರಿದಂತೆ ಸಾವಿರಾರು ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಿ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರು.
ಜಸ್ಟ್ ಡಯಲ್ ಪ್ರೈವೇಟ್ ಲಿ., ಸನ್ ಬ್ರೈಟ್, ಹೋಂಡಾ, ಟೋಯೋಟಾ (ಕಮ್ಯುನಿಕೇಶನ್), ಸನ್ಬಿಜ್ ಸೊಲುಷನ್, ನವಚೇತನ ಮೈಕ್ರೊ ಫೈನಾನ್ಸ್, ಡಿ ಮಾರ್ಟ್, ಗೋದ್ರೇಜ್, ಎಲ್.ಐ.ಸಿ., ಸ್ಟಾರ್ಟೊನಿಕ್ಸ್ ಮಾಡ್ಯೂಲರ್ ಸಿಸ್ಟಂ ಪ್ರೈ ಲಿ., ಕ್ರೆಡಿಟ್ ಆಕ್ಸೇಸ್ ಗ್ರಾಮೀಣ ಬ್ಯಾಂಕ್, ಪಿವಿಆರ್ ಸಿನೆಮಾಸ್, ಐಸಿಐಸಿಐ ಬ್ಯಾಂಕ್, ಮರ್ವೇಲ್ ಟೆಕ್ನಾಲಜಿಸ್, ಟಾಟಾ ಸೇರಿದಂತೆ ದೇಶದ ಸುಮಾರು 35 ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಉದ್ಯೋಗಾವಕಾಶ ಕಲ್ಪಿಸಿದ್ದವು. ನೋಂದಣಿ ಮಾಡಿಕೊಂಡ ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಿದ ಆಯಾ ಕಂಪನಿಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಪ್ರತಿಭಾವಂತರನ್ನು ನೇಮಕ ಮಾಡಿಕೊಂಡರು. ಬೆಳಗ್ಗೆ 8.30 ಗಂಟೆಗೆ ಆರಂಭಗೊಂಡ ನೇಮಕ ಪ್ರಕ್ರಿಯೆ ಸಂಜೆ 4.30 ಗಂಟೆಗೆ ಮುಕ್ತಾಯಗೊಂಡಿತು.
ಶಿಬಿರ ಉದ್ಘಾಟಿಸಿದ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ತಾಲೂಕಿನಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಉದ್ಯೋಗ ಸಮೃದ್ಧಿ ಕೇಂದ್ರ ಆರಂಭಿಸಿ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿ, ಉದ್ಯೋಗ ದೊರಕಿಸುವ ಪ್ರಯತ್ನ ಕಳೆದ ಒಂದೂವರೆ ವರ್ಷದಿಂದ ಮಾಡಲಾಗುತ್ತಿದೆ. ವಿದ್ಯಾರ್ಹತೆ ಆಧರಿಸಿ ಕನಿಷ್ಠ ರೂ. 10 ಸಾವಿರದಿಂದ ರೂ. 75 ಸಾವಿರ ಸಂಬಳ ಸಿಗುವಂತಹ ಉದ್ಯೋಗಗಳನ್ನು ಪಡೆಯಲು ಅನುಕೂಲವಾಗಲು ಈ ಮೇಳ ಆಯೋಜಿಸಿದ್ದೇವೆ. ದೇಶದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಆವರಿಸಿದೆ. ಹಾಗಾಗಿ ಮೊದಲು ಉದ್ಯೋಗದ ಪ್ರಾರಂಭವಾಗಬೇಕಿದೆ. ಅದೆಷ್ಟೋ ರೈತರು ತಮ್ಮ ಜಮೀನು ಮಾರಿ ಮಕ್ಕಳಿಗೆ ವಿದ್ಯಾಭ್ಯಾಸ ದೊರಕಿಸುತ್ತಿದ್ದಾರೆ. ಆದರೆ ಕಲಿತ ಮಕ್ಕಳು ಉದ್ಯೋಗ ಇಲ್ಲದೇ ಅಲೆಯುವಂತಾಗಿದೆ. ಇದು ನಮ್ಮ ತಾಲೂಕಿನಲ್ಲಿ ಕಡಿಮೆಯಾಗಬೇಕೆನ್ನುವ ಉದ್ದೇಶದಿಂದ ಇಂಥ ಪ್ರಯತ್ನ ಮಾಡಿದ್ದಾಗಿ ತಿಳಿಸಿದ ಅವರು ಇನ್ನು ಮುಂದೆ ಕನಿಷ್ಠ ಪ್ರತಿ 6 ತಿಂಗಳಿಗೊಮ್ಮೆ ಇಂತಹ ಮೇಳ ಆಯೋಜಿಸುವ ಉದ್ದೇಶವಿದೆ. ಉದ್ಯೋಗ ಸಮೃದ್ಧ ಹಾನಗಲ್ಲ ಮಾಡಲು ಕಾಳಜಿ ವಹಿಸುವುದಾಗಿ ತಿಳಿಸಿದರು.
ಲೋಯಲ ಸಮೂಹ ಸಂಸ್ಥೆಗಳ ಮುಖ್ಯಸ್ಥ ಫಾ.ಮೆಲ್ವಿನ್ ಲೋಬೊ, ಲೋಯಲ ವಿಕಾಸ ಕೇಂದ್ರದ ನಿರ್ದೇಶಕ ಫಾ.ಜೇರಾಲ್ಡ್, ಸಹ ನಿರ್ದೇಶಕ ಫಾ.ಜೇಸಸ್, ರೋಶನಿ ಟ್ರಸ್ಟ್ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜ, ಹ್ಯುಮ್ಯಾನಿಟಿ ಫೌಂಡೇಶನ್ ಅಧ್ಯಕ್ಷೆ ಸ್ವಾತಿ ಮಾಳಗಿ, ಪ್ರಗತಿಪರ ಮುಖಂಡ ಡಾ.ಎನ್.ಎಫ್.ಕಮ್ಮಾರ, ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ ಇದ್ದರು.
Kshetra Samachara
11/01/2025 07:27 pm