ಹಾವೇರಿ: ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ವೆಂಕಟೇಶ್ವರ ದೇವಸ್ಥಾನದ ವೈಕುಂಠದ ಪ್ರತಿರೂಪವನ್ನ ಸೃಷ್ಟಿಸಲಾಗಿತ್ತು. ಮುಂಜಾನೆ ವೆಂಕಟೇಶ್ವರ ಮೂರ್ತಿಗೆ 16 ದ್ರವ್ಯಗಳಿಂದ ಮಹಾಭಿಷೇಕ ನಡೆಸಲಾಯಿತು. 8 ಗಂಟೆಗೆ ಗರ್ಭಗುಡಿಯಲ್ಲಿರುವ ವೆಂಕಟೇಶ್ವರನಿಗೆ ತುಳಸಿ ಅರ್ಪಣೆ ಮಾಡಿ ಪಲ್ಲಕ್ಕಿಯೊಂದಿಗೆ ಮೂರ್ತಿಯ ಪ್ರದಕ್ಷಿಣೆ ಹಾಕಿಸಲಾಯಿತು.
ವೈಕುಂಠ ಮಹಾದ್ವಾರ ನಿರ್ಮಿಸಿ ಶ್ರೀದೇವಿ ಭೂದೇವಿ ಸಹಿತ ವೆಂಕಟೇಶ್ವರ ಸ್ವಾಮಿಯ ಚರಪ್ರತಿಷ್ಠಾಪನೆ ಮಾಡಲಾಯಿತು. ಮುಂಜಾನೆ 10 ಗಂಟೆಯಿಂದ ಆರಂಭವಾದ ಸಾರ್ವಜನಿಕ ದರ್ಶನ ಸಂಜೆವರೆಗೆ ನಡೆಯಿತು. ಹಾವೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಸರತಿಯಲ್ಲಿ ನಿಂತು ವೆಂಕಟೇಶ್ವರನ ದರ್ಶನ ಪಡೆದು ಪುನೀತರಾದರು.
ಬಂದ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರಸಾದ ಮತ್ತು ಲಡ್ಡು ವಿತರಿಸಿತು. ಅಲ್ಲದೆ ಮಹಿಳೆಯರಿಗೆ ಉಡಿ ತುಂಬಿ ಸತ್ಕರಿಸಲಾಯಿತು. ವೈಕುಂಠ ಏಕಾದಶಿ ಅಂಗವಾಗಿ ದೇವಸ್ಥಾನದಲ್ಲಿ ಭಜನೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಅರ್ಚಕರು, ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ವಿವಿಧ ದ್ರವ್ಯಗಳಿಂದ ಅಭಿಷೇಕ ಸಲ್ಲಿಸಿ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು.
Kshetra Samachara
11/01/2025 12:44 pm