ಬೀದರ್: ಅಧಿಕಾರಿಗಳು ರೈತರ ಬಗ್ಗೆ ಕಾಳಜಿ ವಹಿಸಬೇಕು. ಅವರ ಕೆಲಸಗಳನ್ನು ಮೊದಲ ಆದ್ಯತೆಯಂತೆ ಮಾಡಿಕೊಡಬೇಕು. ಅವರಿಗೆ ತೊಂದರೆಯಾದರೆ ನಾನು ಯಾವುದೇ ಕಾರಣಕ್ಕೂ ಸಹಿವುವುದಿಲ್ಲ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ವಡಗಾಂವ ವ್ಯಾಪ್ತಿಯಲ್ಲಿನ ಲಾಧಾ, ಕೌಡಗಾಂವ, ಬಲ್ಲೂರ(ಜೆ), ಕೌಠಾ(ಕೆ), ಕೌಠಾ(ಬಿ), ಪಾಶಾಪೂರ, ಗಡಿಕುಶನೂರ, ಆಲೂರ(ಬಿ), ಬೇಲೂರ(ಎನ್) ಹಾಗೂ ಆಲೂರ(ಕೆ)ನಲ್ಲಿ ಜ.10ರಂದು ಗ್ರಾಮ ಸಂಚಾರ ನಡೆಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.
ಯಾವುದಾದರು ಕಛೇರಿಯಲ್ಲಿ ಸಣ್ಣ ಪುಟ್ಟ ಕೆಲಸಗಳಿದ್ದರೂ ರೈತರು ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಪಟ್ಟಣಕ್ಕೆ ಬರಬೇಕಾಗುತ್ತದೆ. ಅವರ ಕೆಲಸಗಳನ್ನು ವಿಳಂಬ ಮಾಡದೇ ಮಾಡಿಕೊಡಬೇಕು. ಕಛೇರಿಗಳಿಗೆ ಬಂದಾಗ ಅವರೊಂದಿಗೆ ಸೌಜನ್ಯತೆಯಿಂದ ವ್ಯವಹರಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕೌಠಾ(ಬಿ), ನಾಗನಪಲ್ಲಿಯಂತಹ ಸಾಕಷ್ಟು ಗ್ರಾಮಗಳಲ್ಲಿ ಪಹಣಿಯಲ್ಲಿ ದೋಷಗಳಾಗಿರುವ ಬಗ್ಗೆ ರೈತರು ಸಮಸ್ಯೆ ಹಂಚಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಸಮಸ್ಯೆಯಾಗುತ್ತಿದೆ. ಅವುಗಳನ್ನು ಕೂಡಲೇ ಪರಿಹರಿಸಿಕೊಡಬೇಕು. ಪಾಶಾಪೂರ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಸಮಸ್ಯೆಯಾಗಿರುವ ಬಗ್ಗೆ ಗಮನಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಇದು ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕು. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿಸಿ ರೈತರ ಸಮಸ್ಯೆ ಪರಿಹರಿಸಬೇಕು. ಎಲ್ಲ ಗ್ರಾಮಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ರೈತರ ಕೃಷಿ ಜಮೀನುಗಳಿಗೆ ರಸ್ತೆ ನಿರ್ಮಿಸಿಕೊಡುವ ಕೆಲಸ ಗ್ರಾಮ ಪಂಚಾಯಿತಿಗಳಿಂದ ಆಗಬೇಕು ಎಂದು ಸೂಚಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ರೈತರಿಗಾಗಿ ಇರುವ ಯೋಜನೆಗಳು ಲಾಭ ಪಡೆದವರೇ ಪುನಃ ಅರ್ಜಿ ಸಲ್ಲಿಸುತ್ತಿದ್ದು, ಬೇರೆ ರೈತರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಸರ್ಕಾರದ ಯೋಜನಗಳ ಬಗ್ಗೆ ಎಲ್ಲ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ಗ್ರಾಮ ಸೇವಕರು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇಲಾಖೆಯಿಂದಲೂ ಇನ್ನಷ್ಟು ಪ್ರಚಾರ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯಬೇಕು ಎಂದು ಹೇಳಿದರು.
ಅಭಿವೃದ್ಧಿ ಕೆಲಸಗಳಿಗೆ ಚಾಲನೆ: ಲಾಧಾ, ಬಲ್ಲೂರ(ಜೆ), ಕೌಠಾ(ಕೆ), ಕೌಠಾ(ಬಿ), ಪಾಶಾಪೂರ, ಗಡಿಕುಶನೂರ, ಬೇಲೂರ(ಎನ್) ಹಾಗೂ ಆಲೂರ(ಕೆ) ಗ್ರಾಮಗಳಲ್ಲಿ ಶಾಲಾ ಕೋಣೆಗಳ ದುರಸ್ತಿ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯುತ್ತೀಕರಣ, ಸೋಲಾರ್ ಪೆನಲ್ ಅಳವಡಿಸುವುದು ಹಾಗೂ ಕೆಲವೆಡೆ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
Kshetra Samachara
10/01/2025 06:30 pm