ಬೀದರ್: ಶಾಸಕ ಪ್ರಭು ಬಿ.ಚವ್ಹಾಣ ಅವರ ಮನವಿಯ ಮೇರೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಜನವರಿ 7ರಂದು ಬೀದರ್-ಕಮಲನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದರು.
ಬೆಳಗಾವಿ ಅಧಿವೇಶನದಲ್ಲಿ ರಾಷ್ಟ್ರೀಯ ಹೆದ್ದಾರಿ ಕಳಪೆಯಾಗಿರುವ ಬಗ್ಗೆ ಶಾಸಕರು ಸರ್ಕಾರದ ಗಮನಕ್ಕೆ ತಂದಿದ್ದರು. ಜನರ ಜೀವಕ್ಕೆ ಸಂಚಕಾರವಾಗಿ ಪರಿಣಮಿಸಿರುವ ರಸ್ತೆಯನ್ನು ಖುದ್ದಾಗಿ ವೀಕ್ಷಿಸಬೇಕೆಂದು ಮನವಿ ಮಾಡಿದ್ದರು. ಅದರಂತೆ ಸಚಿವರು ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸಿದರು.
ರಸ್ತೆ ತುಂಬೆಲ್ಲ ಬಿರುಕುಗಳು ಬಿಟ್ಟಿರುವುದನ್ನು ಕಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟೊಂದು ಲೋಪಗಳಿದ್ದರೆ ಹೇಗೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಈ ರಸ್ತೆಯನ್ನು ತುರ್ತಾಗಿ ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಶಾಸಕ ಪ್ರಭು ಚವ್ಹಾಣ ಅವರು, ನನ್ನ ಮತಕ್ಷೇತ್ರದ ಜನತೆ ಜಿಲ್ಲಾ ಕೇಂದ್ರಕ್ಕೆ ಸಂಚರಿಸಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಬಹಳಷ್ಟು ಶ್ರಮ ವಹಿಸಿ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ. 2018ರಲ್ಲಿ ಆರಂಭವಾದ ಈ ಕಾಮಗಾರಿಯ ಬಗ್ಗೆ ಆರಂಭದಿಂದಲೂ ದೂರುಗಳು ಬರುತ್ತಿವೆ. ಕೆಲಸ ಸಂಪೂರ್ಣ ಕಳಪೆಯಾಗಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿವರೆಗೆ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 130ಕ್ಕೂ ಹೆಚ್ಚು ಜನ ಮೃತಪಟ್ಟು 500ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಬಗ್ಗೆ ವರದಿಗಳಾಗಿವೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯತನದಿಂದಾಗಿ 54.37 ಕಿ.ಮೀ ಉದ್ದದ ರಸ್ತೆ ಆರಂಭದಿಂದ ಕೊನೆವರೆಗೆ ಸಂಪೂರ್ಣ ಕೆಟ್ಟು ಹೋಗಿದೆ.
ಒಂದೆರಡು ಕಡೆಗಳಲ್ಲಿ ಕೆಟ್ಟಿದ್ದರೆ ದುರಸ್ತಿಯಿಂದ ಸರಿಹೋಗಬಹುದಿತ್ತು. ಆದರೆ ಸಂಪೂರ್ಣ ರಸ್ತೆ ಕೆಟ್ಟು ಹೋಗಿರುವುದರಿಂದ ದುರಸ್ತಿ ಕಾರ್ಯದಿಂದ ಪರಿಸ್ತಿತಿ ಸುಧಾರಿಸುವುದಿಲ್ಲ. ಹಾಗಾಗಿ ಸದರಿ ರಸ್ತೆ ಪುನಃ ಹೊಸದಾಗಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೆಯೇ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಶರಣು ಸಲಗರ್, ಡಾ.ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.
PublicNext
08/01/2025 07:26 am