ಮಂಗಳೂರು: ನಗರದ ಡೊಂಗರಕೇರಿ ಶ್ರೀವೆಂಕಟರಮಣ ದೇವಾಲಯದಲ್ಲಿ ಶುಕ್ರವಾರ ವೈಕುಂಠ ಏಕಾದಶಿಯ ಸಂಭ್ರಮ ಹೆಚ್ಚಿದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವೈಕುಂಠದ ದ್ವಾರವನ್ನು ತೆರೆಯಲಾಗಿದೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಶ್ರೀ ದೇವರ ಸಾನಿಧ್ಯಭಿವೃದ್ಧಿ ಹಾಗೂ ಲೋಕ ಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ನಡೆಯಿತು ಎಂದರು.
ದೇವಸ್ಥಾನದ ಮುಂಭಾಗದಲ್ಲಿ ವೈಕುಂಠ ದ್ವಾರವನ್ನು ತೆರೆಯಲಾಗಿದೆ. ವಿವಿಧ ಬಗೆಯ ಹೂ, ಸಾವಯವ ಸಸಿಗಳಿಂದ ದೇವಾಲಯವನ್ನು ಸಿಂಗರಿಸಲಾಗಿದೆ. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಈ ಬಾರಿ ದೇವಳವನ್ನು ವಿಶೇಷವಾಗಿ ವಿವಿಧ ಸಾವಯವ ಸೊಪ್ಪುಗಳ (ಪ್ರಧಾನವಾಗಿ ಪಾಲಕ್) ಸಸಿಗಳಿಂದ ಅಲಂಕರಿಸಲಾಗಿದೆ. ಹರಿವೆ, ಪಾಲಕ್, ಬೆಂಡೆ, ಕೆಂಪು ತುಳಸಿ ಸಹಿತ ವಿವಿಧ ಸಸಿಗಳನ್ನು ನೈಸರ್ಗಿಕವಾಗಿ ಬೆಳೆಸಿ ಅಲಂಕಾರಕ್ಕೆ ಬಳಸಲಾಗಿದೆ.
ವಿಶೇಷವಾಗಿ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಸೊಪ್ಪಿನ ಗಿಡಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ. ಈ ಮೂಲಕ 10 ಸಾವಿರ ಮನೆಗಳಿಗೆ ಸಾವಯವ ಬೆಳೆಯನ್ನು ತಲುಪಿಸುವ ಉದ್ದೇಶವನ್ನು ದೇವಾಲಯದ ಆಡಳಿತ ಸಮಿತಿ ಹೊಂದಿದೆ. ಸಾವಯವ ಗಿಡಗಳ ಬೆಳೆಸುವಿಕೆಗೆ ಹಲವಾರು ಮಹಿಳೆಯರು ನವೆಂಬರ್‌ನಿಂದಲೇ ತೊಡಗಿಸಿಕೊಂಡಿದ್ದಾರೆ.
ದೇವಾಲಯ ಸಂಪೂರ್ಣ ಸಾವಯವ ಸೊಪ್ಪುಗಳಿಂದಲೇ ಅಲಂಕೃತಗೊಂಡಿದೆ. ಭಕ್ತರೂ ಈ ಅಲಂಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಗ್ಗಿನಿಂದಲೇ ಭಕ್ತರು ವೈಕುಂಠ ದ್ವಾರದ ಮೂಲಕ ಪ್ರವೇಶಿಸಿ ಸರತಿ ಸಾಲಿನಲ್ಲಿ ಶ್ರೀ ವೆಂಕಟರಮಣ ದೇವರ ದರ್ಶನ ಪಡೆಯುತ್ತಿರುವುದು ಕಂಡು ಬರುತ್ತಿದೆ.
PublicNext
10/01/2025 05:39 pm